ಬೆಂಗಳೂರು: ಡೆಕ್ಕಾನ್ ಹೆರಾಲ್ಡ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಎನ್.ಸಿ.ಗುಂಡೂರಾವ್ (N.C.Gundurao) ಅವರು ಗುರುವಾರ ಸಂಜೆ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಸುಮಾರು ನಾಲ್ಕು ದಶಕಗಳ ಕಾಲ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, 2004ರವರೆಗೆ ಪ್ರಧಾನ ಸಂಪಾದಕರಾಗಿ ನಿವೃತ್ತಿ ಪಡೆದಿದ್ದರು.
ಗುಂಡೂರಾವ್ ಅವರು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಪುತ್ರಿಯ ನಿವಾಸದಲ್ಲಿರುವಾಗ ತೀವ್ರ ಹೃದಯಾಘಾತದಿಂದ ಕೊನೆ ಉಸಿರು ಎಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಿಎಂ ಸಂತಾಪ
ಇನ್ನೂ ಹಿರಿಯ ಪತ್ರಕರ್ತ ಗುಂಡೂರಾವ್ ಅಗಲಿಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಟ್ಚೀಟ್ ಮಾಡಿರುವ ಅವರು, ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ ಅವರ ನಿಧನದಿಂದ ದುಃಖಿತನಾಗಿದ್ದೇನೆ.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫ್ರೂವ್ ರೀಡರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಗುಂಡೂರಾವ್ ಅವರು ನಂತರ ಪತ್ರಿಕೆಯ ಸಹಸಂಪಾದಕರಾಗಿ ನಿವೃತ್ತರಾಗಿದ್ದರು ಎನ್ನುವುದು ಅವರಲ್ಲಿನ ವೃತ್ತಿಪರತೆ – ಬದ್ಧತೆಗೆ ನಿದರ್ಶನ.
ಈ ಪತ್ರಿಕೆಯಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ವೃತ್ತಿನಿರತರಾಗಿದ್ದ ಗುಂಡೂರಾವ್ ಅವರ ರಾಜಕೀಯ ವರದಿಗಾರಿಕೆ ಮತ್ತು ಅಂಕಣ ಬರಹಗಳು ಆ ಕಾಲದಲ್ಲಿ ನನ್ನಂತಹವರಿಗೆ ಮಾರ್ಗದರ್ಶನ ನೀಡುತ್ತಿತ್ತು.
ಸರಳ ಮತ್ತು ಸಜ್ಜನರಾಗಿದ್ದ ಗುಂಡೂರಾವ್ ಅವರು ವೃತ್ತಿಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಮಾಧ್ಯಮರಂಗದ ಇಂದಿನ ಪೀಳಿಗೆಗೆ ಇವರ ಬದುಕು ಮತ್ತು ಸಾಧನೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ.
ಗುಂಡೂರಾವ್ ಅವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರೆಲ್ಲರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.