ದೊಡ್ಡಬಳ್ಳಾಪುರ: ಕನ್ನಡ ಜಾಗೃತಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ಇಎಸ್ಐ ಆಸ್ಪತ್ರೆ (ESI Hospital) ಉದ್ಘಾಟನೆ ಹಾಗೂ ಜಿಲ್ಲಾ ಆಸ್ಪತ್ರೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ (Dr.K.N. Anuradha) ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್, ಕೈಗಾರಿಕಾ ಪ್ರದೇಶದಲ್ಲಿರುವ ಇಎಸ್ಐ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ನಾಲ್ಕು ವರ್ಷಗಳಾಗಿದ್ದರೂ ಇನ್ನೂ ಸಾರ್ವಜನಿಕ ಬಳಕೆಗೆ ತೆರೆಯಲಾಗಿಲ್ಲ.
ಕೈಗಾರಿಕಾ ಕಾರ್ಮಿಕರು ತಮ್ಮ ವೇತನದಿಂದ ಇಎಸ್ಐ ಯೋಜನೆಗೆ ಕೊಡುಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ತಕ್ಷಣ ಆರೋಗ್ಯ ಸೇವೆ ಲಭ್ಯವಾಗಬೇಕು. ಆದ್ದರಿಂದ ಕೂಡಲೇ ಆಸ್ಪತ್ರೆಯನ್ನು ಉದ್ಘಾಟಿಸಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಇದರೊಂದಿಗೆ ನೆನೆಗುದಿಗೆ ಬಿದ್ದಿರುವ ಜಿಲ್ಲಾಸ್ಪತ್ರೆ ಶೀಘ್ರ ನಿರ್ಮಾಣವಾಗಬೇಕಿದೆ. ದೊಡ್ಡಬಳ್ಳಾಪುರ ನಗರ ಹಾಗೂ ಕೈಗಾರಿಕಾ ಪ್ರದೇಶದ ಮುಖ್ಯ ಮತ್ತು ಒಳರಸ್ತೆಗಳು ಹದಗೆಟ್ಟಿದ್ದು ಅಪಘಾತಗಳಿಗೆ ಕಾರಣವಾಗುತ್ತಿವೆ. ಮಳೆಗಾಲದಲ್ಲಿ ನೀರು ನಿಂತು ಸಂಚಾರ ಅಸಾಧ್ಯವಾಗುತ್ತಿದೆ. ಆದ್ದರಿಂದ ಎಲ್ಲಾ ರಸ್ತೆಗಳ ಡಾಂಬರೀಕರಣ ಹಾಗೂ ಗುಂಡಿಗಳ ಮುಚ್ಚುವ ಕಾರ್ಯ ತಕ್ಷಣ ಕೈಗೊಳ್ಳಬೇಕು. ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿವಿಗೆ ಅನುಕೂಲ ಮಾಡಬೇಕು.
ದೊಡ್ಡಬಳ್ಳಾಪುರದಲ್ಲಿ ಶಾಶ್ವತ ನದಿ ಅಥವಾ ಸಮರ್ಪಕ ನೀರಿನ ಮೂಲಗಳಿಲ್ಲ. ಭೂಗರ್ಭಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಜನರು ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಕಾವೇರಿ ನದಿಯ ನೀರನ್ನು ಶಾಶ್ವತ ಯೋಜನೆಯಡಿ ದೊಡ್ಡಬಳ್ಳಾಪುರಕ್ಕೆ ಒದಗಿಸಿ ಜನರ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು.
ದೊಡ್ಡಬಳ್ಳಾಪುರಕ್ಕೆ ಮೆಟ್ರೋ ರೈಲು ಸೇವೆ, ಸಬ್-ಅರ್ಬನ್ ರೈಲ್ವೆ ಯೋಜನೆಗಳು ಜಾರಿಯಾಗಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಟಾನಗೊಳಿಸಬೇಕು. ಕನ್ನಡ ಶಾಲೆಗಳ ರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳದ ಅಗ್ನಿ ವೆಂಕಟೇಶ್, ಜಿಲ್ಲಾಧ್ಯಕ್ಷ ಎಂ.ನಾಗರಾಜು ತಾಲೂಕು ಅಧ್ಯಕ್ಷ ಸಿ. ಶಶಿಧರ್, ಕಾರ್ಯಾಧ್ಯಕ್ಷ ಮಹದೇವ್, ಜಿಲ್ಲಾ ನಗರ ಉಪಾಧ್ಯಕ್ಷ ಗಿರೀಶ್, ಸಹ ಕಾರ್ಯದರ್ಶಿ ಶಿವಪ್ರಸಾದ್, ಯುವ ಘಟಕದ ಭವೀಶ್, ಮೋಹನ್ ಎಸ್ ಎನ್, ಮಂಜುನಾಥ್, ನಿಶಾಂತ್ ಭಾಗವಹಿಸಿದ್ದರು.