ದೊಡ್ಡಬಳ್ಳಾಪುರ; ಶ್ರೀ ಘಾಟಿ ಸುಬ್ರಹ್ಮಣ್ಯ (Sri Ghati Subrahmanya) ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹184 ಕೋಟಿ ಮೊತ್ತದ ಕೇಂದ್ರ ಸರ್ಕಾರದ ಯೋಜನೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದು ಸಂಸದ ಡಾ.ಕೆ. ಸುಧಾಕರ್ (Dr.K. Sudhakar) ಹೇಳಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ‘ಪ್ರಸಾದ್ 2.0’ (PRASHAD 2.0) ಯೋಜನೆಯಡಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಲಾದ ₹184 ಕೋಟಿ ಮೊತ್ತದ ಈ ಪ್ರಸ್ತಾವನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಒಂದು ತಿಂಗಳೊಳಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಶ್ರೀಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಸೌಕರ್ಯ, ನೈರ್ಮಲ್ಯ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಪವಿತ್ರ ಕ್ಷೇತ್ರವನ್ನು ಮಾದರಿ ಯಾತ್ರಾಸ್ಥಳವಾಗಿ ರೂಪಿಸುವುದು ನನ್ನ ಗುರಿಯಾಗಿದ್ದು, ಈ ಪ್ರಯತ್ನಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸುಧಾಕರ್ ಬರೆದಿದ್ದಾರೆ.