ಬೆಂಗಳೂರು: ಈ ಬಾರಿಯ ದೀಪಾವಳಿಯನ್ನು ಚೀನಾ ವಸ್ತುಗಳ ಬಳಕೆಯನ್ನು ಬಿಟ್ಟು ,ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ರಾಷ್ಟ್ರೋತ್ಥಾನ ಪರಿಷತ್ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ.
ಈ ಕುರಿತು ಪ್ರಕಟಣೆ ಮೂಲಕ ಕರೆ ನೀಡಿರುವ ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೀಯ ಕಾಮಧೇನು ಆಯೋಗವು ದೇಶಾದ್ಯಂತ ಸೆಗಣಿಯಿಂದ (ಗೋಮಯ) ತಯಾರಿಸಿದ ಹಣತೆಯ ಮೂಲಕ ದೀಪಾವಳಿ ಆಚರಿಸುವ ‘ಕಾಮಧೇನು ದೀಪಾವಳಿ’ ಎಂಬ ಬೃಹತ್ ಆಂದೋಲನ ಹಮ್ಮಿಕೊಂಡಿದೆ. ಈ ಅಭಿಯಾನದೊಂದಿಗೆ ರಾಷ್ಟ್ರೋತ್ಥಾನ ಪರಿಷತ್ ಕೈ ಜೋಡಿಸಿದೆ.
ರಾಷ್ಟ್ರೋತ್ಥಾನ ಪರಿಷತ್ ದೇಸಿ ಗೋ ತಳಿಗಳ ರಕ್ಷಣೆಗಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯದ ಸಮೀಪದ ಗೋಶಾಲೆಯನ್ನು ನಡೆಸುತ್ತಿದೆ.ಇಲ್ಲಿ 12 ಭಾರತೀಯ ತಳಿಗಳ 500ಕ್ಕೂ ಅಧಿಕ ಗೋವುಗಳನ್ನು ಸಂರಕ್ಷಿಸಲಾಗಿದೆ.ಈ ಗೋವಿನ ಸೆಗಣಿಯನ್ನು ಬಳಸಿಕೊಂಡು 20,000ಕ್ಕೂ ಅಧಿಕ ದೀಪಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡಲಾಗುವುದು. ಈ ಮೂಲಕ ಭಾರತ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ನಿರ್ಮಿಸಲು ನಾವೆಲ್ಲರೂ ಜೋಡಿಕೊಳ್ಳಬೇಕಾಗಿದೆ ಎಂದಹ ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದೇವೆ.
ಈ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಕಾಮಧೇನು ಆಯೋಗವು ದೇಶಾದ್ಯಂತ 33 ಕೋಟಿ ದೀಪಗಳನ್ನು ತಯಾರಿಸುವ ಗುರಿ ಹೊಂದಿದೆ, ಶ್ರೀರಾಮಚಂದ್ರನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿಯಂದು ಸೆಗಣಿಯಿಂದ ತಯಾರಿಸಿದ 33 ಲಕ್ಷ ದೀಪಗಳನ್ನು ಹಚ್ಚಲು ಹಾಗೂ ವಾರಣಾಸಿಯಲ್ಲಿ 1ಲಕ್ಷ ದೀಪಗಳನ್ನು ಹಚ್ಚಲು ಕಾಮಧೇನು ಆಯೋಗ ನಿರ್ಧರಿಸಿದೆ,ಇದೇ ರೀತಿ ನಮ್ಮ ಮನೆಗಳಲ್ಲಿಯೂ ಸ್ಥಳೀಯ ದೇವಾಲಯಗಳಲ್ಲಿಯೂ ಸೆಗಣಿಯಿಂದ ದೀಪಗಳನ್ನು ತಯಾರಿಸಿ ದೀಪಾವಳಿಯ ಬೆಳಕಿನ ಹಬ್ಬ ಆಚರಿಸೋಣ.
ರಾಜ್ಯದ ವಿವಿಧ ಗೋಶಾಲೆಗಳು, ಸ್ವಯಂಸೇವಾ ಸಂಸ್ಥೆಗಳು,ಸಾಮಾಜಿಕ ಸಂಘಟನೆಗಳು ಸೆಗಣಿಯಿಂದ ದೀಪ ತಯಾರಿಸಿ ಜನರಿಗೆ ನೀಡುವ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ಕರೊನಾ ಹರಡುವುದನ್ನು ತಡೆಗಟ್ಟುವುದರಲ್ಲಿಯೂ ಗೋ ಉತ್ಪನ್ನಗಳು ಪರಿಣಾಮಕಾರಿಯಾಗುತ್ತದೆ ಎನ್ನುವುದನ್ನು ಈಗಾಗಲೇ ಸಿದ್ಧವಾಗಿದೆ, ಈ ಬಾರಿಯ ದೀಪಾವಳಿಯನ್ನು ಸೆಗಣಿ ಹಾಗೂ ಪಂಚಗವ್ಯವನ್ನು ವ್ಯಾಪಕವಾಗಿ ಬಳಸುವ ಮೂಲಕ ಸ್ವಚ್ಛ ಮತ್ತು ಆರೋಗ್ಯಪೂರ್ಣ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ,ಹಾಗೂ ಈ ಬಾರಿಯ ದೀಪಾವಳಿಗೆ ಚೀನಾ ವಸ್ತುಗಳನ್ನು ಬಳಸದೆ ದೇಸಿ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ನಿರ್ಮಿಸಲು ನಾವೆಲ್ಲಾ ಕೈಜೋಡಿಸಬೇಕಾಗಿ ರಾಷ್ಟ್ರೋತ್ಥಾನ ಪರಿಷತ್ ಈ ಮೂಲಕ ಮನವಿ ಮಾಡುತ್ತಿದೆ.

