ದೊಡ್ಡಬಳ್ಳಾಪುರ: ನೆರೆ, ಬರ ಪರಿಸ್ಥಿತಿ ಸಮಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ರಾಜ್ಯ ಸರ್ಕಾರ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಡಿ.ಎನ್.ಮಂಜುನಾಥ್, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಕರ್ನಾಟಕ ರಾಜ್ಯವನ್ನು ಕಡೆಗಣಿಸುತ್ತಲೇ ಬಂದಿದೆ.ರಾಜ್ಯದಲ್ಲಿ ಈಗ ಅತಿವೃಷ್ಟಿಯಾಗಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇಂತಹ ಸಮಯದಲ್ಲಿಯೂ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ದೋರಣೆ ತೋರುತ್ತಿರುವುದು ಖಂಡನೀಯವಾಗಿದೆ.
ರಾಜ್ಯದಲ್ಲಿ ಹಲವಾರು ಜಿಲ್ಲೆಗಳು ನೆರೆ ಪ್ರವಾಹದಿಂದ ತತ್ತರಿಸಿ ಹೋಗಿದ್ದು,ಅಲ್ಲಿನ ರೈತಾಪಿ ವರ್ಗ,ಜಾನುವಾರು ಹಾಗೂ ಬೆಳೆದ ಬೆಳೆಗಳು ನೀರು ಪಾಲಾಗಿವೆ.ಇದಕ್ಕೆ ಸೂಕ್ತವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಸರ್ಕಾರದಿಂದ ಅನುದಾನ ತರಲು ವಿಫಲವಾಗಿದ್ದಾರೆ. ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರ ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಪ್ರತವರ್ಷ ಪ್ರವಾಹ ಬಂದಾಗ ಮುಳುಗಡೆಯಾಗುತ್ತಿರುವ ಹಲವಾರು ಗ್ರಾಮಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸದೇ ಆ ಗ್ರಾಮಗಳನ್ನು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ರೈತರ ಬೆಳೆಗಳು ಪ್ರವಾಹಕ್ಕೆ ತುತ್ತಾಗಿರುವುದಕ್ಕೆ ಶೀಘ್ರವೇ ಪರಿಹಾರವನ್ನು ಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಉಪಾಧ್ಯಕ್ಷ ಕೃಷ್ಣಪ್ಪ, ನಗರ ಉಪಾಧ್ಯಕ್ಷ ಡಿ.ಜಿ.ಬಾಬು, ಕಾರ್ಮಿಕ ಘಟಕದ ರವಿಕುಮಾರ್, ನಗರ ಕಾರ್ಯದರ್ಶಿ ಬಾಲು,ಮುಖಂಡರಾದ ಜೋಗಿ, ನಾಗೇಶ್, ಕುಮಾರ್ ಮತ್ತಿತರರು ಭಾಗವಹಿಸಿದ್ದರು.

