ದೊಡ್ಡಬಳ್ಳಾಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಒಳಚರಂಡಿಯ ತ್ಯಾಜ್ಯ ನೀರು ಮ್ಯಾನ್ ಹೋಲ್ ಮೂಲಕ ಹೊರಬಂದು ನಗರವಾಸಿಗಳಿಗೆ ತೀವ್ರ ಸಂಕಷ್ಟಕ್ಕೆ ಈಡು ಮಾಡಿದೆ.
ನಗರದ ಹಳೆ ಆಸ್ಪತ್ರೆಯ ರಸ್ತೆ, ಕೆನರಾ ಬ್ಯಾಂಕ್ ಗೆ ಸಾಗುವ ರಸ್ತೆ, ತಾಲೂಕು ಕಚೇರಿ ಮುಂಭಾಗ ಸೇರಿದಂತೆ ಬಹುತೇಕ ಕಡೆ ಮ್ಯಾನ್ ಹೋಲ್ ಗಳಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಕಾರಣ ಸ್ಥಳೀಯರು, ಪಾದಾಚಾರಿಗಳು ವಾಹನ ಸವಾರರಿಗೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೆಲ ಮನೆಗಳ ತ್ಯಾಜ್ಯ ನೀರು, ಹಾಗೂ ಮಳೆ ನೀರನ್ನು ಒಳಚರಂಡಿಗೆ ಹರಿ ಬಿಟ್ಟಿರುವುದು ಹಾಗೂ ಮಳೆ ಹೆಚ್ಚಾಗಿರುವ ಕಾರಣ ಸಮಸ್ಯೆ ತೀವ್ರವಾಗಲು ಕಾರಣ ಎನ್ನಲಾಗಿದೆ.
ನಗರದಲ್ಲಿ ಈಗಾಗಲೆ ರಸ್ತೆಗೆ ಗುಂಡಿಬಿದ್ದು ಹಾಳಾಗಿರುವ ಈ ಬೆನ್ನಲ್ಲೆ ಮ್ಯಾನ್ ಹೋಲ್ ಗಳಿಂದ ತ್ಯಾಜ್ಯ ಹೊರಬಂದು ರಸ್ತೆಗಳಲ್ಲಿ ನಿಲ್ಲುತ್ತಿರುವ ಕಾರಣ ವಾಹನ ಸವಾರಿಗೆ ಗುಂಡಿಗಳು ಕಾಣದೆ ಅಪಘಾತಕ್ಕೆ ಕಾರಣವಾಗುತ್ತಿವೆ.
ಮತ್ತೊಂದೆಡೆ ರೈಲ್ವೆ ಸ್ಟೇಷನ್ಗೆ ಸಾಗುವ ರಸ್ತೆಯಲ್ಲಿನ ರೈಲ್ವೆ ಅಂಡರ್ ಪಾಸ್ ನಲ್ಲಿಯೂ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಕೂಡಲೇ ಅಧಿಕಾರಿ ಸಮಸ್ಯೆ ಬಗೆ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೌರಾಯುಕ್ತರಿಂದ ಸಮಸ್ಯೆ ಬಗೆ ಹರಿಸುವ ಭರವಸೆ
ನಗರದಲ್ಲಿ ಉಂಟಾಗಿರುವ ಸಮಸ್ಯೆ ಕುರಿತಂತೆ ಹರಿತಲೇಖನಿ ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಅವರ ಗಮನಕ್ಕೆ ತಂದಿದ್ದು, ನಗರಸಭೆಯಲ್ಲಿದ್ದ ತ್ಯಾಜ್ಯ ನೀರು ತೆಗೆಯುವ ಜೆಟ್ಟಿಂಗ್ ಮೆಷಿನ್ ದುರಸ್ತಿಗೆ ತೆರಳಿರುವ ಸಂದರ್ಭದಲ್ಲಿಯೇ ಮಳೆ ಸುರಿಯುತ್ತಿರುವ ಕಾರಣ ಸಮಸ್ಯೆ ಹೆಚ್ಚಾಗಿದೆ, ಈ ಕೂಡಲೆ ನೆಲಮಂಗಲದಿಂದ ತಾತ್ಕಾಲಿಕವಾಗಿ ಜೆಟ್ಟಿಂಗ್ ಮಿಷನ್ ತರೆಸಿ ತ್ಯಾಜ್ಯ ನೀರನ್ನು ಹೊರತೆಗೆಯಲಾಗುವುದೆಂದು ತಿಳಿಸಿದ್ದಾರೆ.
ಪೊಟೋ: ಮಹೇಶ್, ನವೀನ್ ಗೌಡ

