ದೊಡ್ಡಬಳ್ಳಾಪುರ: ರೈತರಿಂದ ನೇರವಾಗಿ ಜೋಳ ಖರೀದಿಸುವ ಕುರಿತಂತೆ ಬಮೂಲ್ ಅಧಿಕಾರಿಗಳೊಂದಿಗೆ ಶುಕ್ರವಾರ ಸಂಜೆ 4 ಗಂಟೆಗೆ ಸಭೆ ನಡೆಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಧರಣಿ ನಿರತ ರೈತರಿಗೆ ಭರವಸೆ ನೀಡಿದರು.
ಬೆಂಬಲ ಬೆಲೆ ಯೋಜನೆಯಡಿ ಜೋಳ, ರಾಗಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಮೂರು ದಿನಗಳಿಂದ ರಾಜ್ಯ ರೈತ ಸಂಘದ ಕಾರ್ಯಕರ್ತರು ಧರಣಿ ನಿರತ ರೈತರೊಂದಿಗೆ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಬಮೂಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಭೆಯ ಸಮಯವನ್ನು ನಿಗದಿಪಡಿಸಲಾಗಿದೆ. ಶುಕ್ರವಾರ ಸಂಜೆ ನಡೆಯುವ ಸಭೆಗೆ ರೈತ ಮುಖಂಡರು ಭಾಗವಹಿಸಬಹುದಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಜೋಳವನ್ನು ಖರೀದಿಸಿ ರಾಜಾನುಕುಂಟೆಯಲ್ಲಿನ ಪಶು ಆಹಾರ ತಯಾರಿಕೆಗೆ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಸರ್ಕಾರ ಬೆಲೆ ನಿಗದಿಪಡಿಸಲಿದೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ ಮಾತನಾಡಿ, ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಜೋಳಕ್ಕೆ ₹1,850 ಬೆಲೆ ನಿಗದಿಪಡಿಸಿದೆ. ಆದರೆ ಮುಕ್ತಮಾರುಕಟ್ಟೆಯಲ್ಲಿ ₹1,200ಗಳಿಗೆ ಬೆಲೆ ಕುಸಿತವಾಗಿದೆ. ಪೂರ್ಣ ಪ್ರಮಾಣದಲ್ಲಿ ಜೋಳ ಕೊಯ್ಲಾಗಿ ಮಾರುಕಟ್ಟೆಗೆ ಬಂದರೆ ಮತ್ತಷ್ಟು ಬೆಲೆ ಕುಸಿತವಾಗಲಿದೆ. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಖರೀದಿ ಕೇಂದ್ರವನ್ನು ತುರ್ತಾಗಿ ತೆರೆಯಲೇಬೇಕಿದೆ ಎಂದರು.
ಎಪಿಎಂಸಿ ಆವರಣದಲ್ಲೇ ಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು. ಜೋಳ ಖರೀದಿ ಕೇಂದ್ರವನ್ನು ಎರಡು ವಾರಗಳ ಒಳಗಾಗಿ ಪ್ರಾರಂಭಿಸದೇ ಇದ್ದರೆ ಮತ್ತೆ ನಮ್ಮ ಧರಣಿಯನ್ನು ಆರಂಭಿಸಲಾಗುವುದು. ಜಿಲ್ಲಾಡಳಿತದ ಭರವಸೆ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದರು.
ಮೂರು ದಿನಗಳಿಂದ ತಾಲ್ಲೂಕು ಕಚೇರಿ ಆವರಣದಲ್ಲೇ ರೈತರು ಅಡುಗೆ ಮಾಡಿಕೊಂಡು ಧರಣಿಯನ್ನು ನಡೆಸುತ್ತಿದ್ದರು. ಗುರುವಾರ ಇಡೀ ದಿನ ಹಾರ್ಮೋನಿಯಂ, ತಬಲ ಮತ್ತಿತರೆ ವಾಧ್ಯ ಪರಿಕರಗಳೊಂದಿಗೆ ತಾಲ್ಲೂಕು ಕಚೇರಿ ಆವರಣದಲ್ಲೇ ಸಂಗೀತ ಕಚೇರಿಯನ್ನು ಏರ್ಪಡಿಸಿ ಜನಪದ, ಪೌರಾಣಿಕ ನಾಟಕ, ಹೋರಾಟದ ಹಾಡುಗಳನ್ನು ಹಾಡುವ ಮೂಲಕ ಧರಣಿಯನ್ನು ನಡೆಸಲಾಯಿತು.
ಧರಣಿ ನಿರತ ರೈತರೊಂದಿಗೆ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾದಿಕಾರಿ ಡಾ.ಜಗದೀಶ್ನಾಯ್ಕ್, ಉಪವಿಭಾಗಾಧಿಕಾರಿ ಅರುಳ್ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಇದ್ದರು. ಧರಣಿಯಲ್ಲಿ ರೈತ ಸಂಘದ ಮುಖಂಡರಾದ ಉಮಾದೇವಿ, ಸತೀಶ್, ಮಹದೇವ್, ಬಚ್ಚಹಳ್ಳಿಸತೀಶ್, ವಸಂತ್ ಕುಮಾರ್, ವಾಸು. ಹರೀಶ್ ಇದ್ದರು.

