ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಮನೆಯ ಮಾಲೀಕ ರವಿಕುಮಾರ್ (42), ಮಗ ರಾಹುಲ್ (15) ಮೃತಪಟ್ಟಿದ್ದಾರೆ. ಮೃತ ರವಿಕುಮಾರ್ ಪತ್ನಿ ಮುನಿರಾಜಮ್ಮ ಹಾಗೂ ಮಗಳು ರುಚಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಕುಸಿತವಾಗುತ್ತಿದ್ದಂತೆ ಅಕ್ಕಪಕ್ಕದವರು ಗಮನಿಸಿದ್ದು, ಕೂಡಲೆ ನಾಲ್ವರನ್ನೂ ಅವಶೇಷಗಳಿಂದ ಹೊರ ತೆಗೆಯಲು ಯತ್ನಿಸಿದ್ದಾರೆ. ಆದರೆ ಸಾದ್ಯವಾಗದ ಹಿನ್ನೆಲೆ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೊನೆಗೆ ಸ್ಥಳಕ್ಕೆ ಬಂದ ಆಗ್ನಿಶಾಮಕ ದಳ ಸಿಬ್ಬಂದಿ ನಾಲ್ವರನ್ನು ಹೊರತೆಗೆದಿದ್ದಾರೆ. ಈ ವೇಳೆ ತಂದೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ಗಾಯಾಳುಗಳಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

