ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಬೆಳೆ ಉತ್ತಮ ಫಸಲು ಬಂದಿದ್ದು, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗಾಗುವ ನಷ್ಟದಿಂದ ಪಾರುಮಾಡಲು ಸರ್ಕಾರ ಕೂಡಲೇ ರಾಗಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆಯಬೇಕೆಂದು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ರಾಗಿ ಉತ್ತಮ ಇಳುವರಿ ಬಂದಿರುವುದರಿಂದ ಕರೊನಾ ಸಂಕಷ್ಟದಲ್ಲಿದ್ದ ರೈತರ ಮುಖದಲ್ಲಿ ಅಲ್ಪ ಮಟ್ಟದ ನಗುವನ್ನು ಮೂಡಿಸಿದೆ. ಇದರ ಬೆನ್ನಲ್ಲೆ ಸರ್ಕರ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆದಲ್ಲಿ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ರಾಗಿ ಖರೀದಿಸಿ ರೈತರಿಗೆ ಅನ್ಯಾಯವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 10286, ನೆಲಮಂಗಲ 11742, ಹೊಸಕೋಟೆ 8524, ದೇವನಹಳ್ಳಿ 10484 ಹೆಕ್ಟೇರ್ ಪ್ರದೇಶ ಸೇರಿ ಜಿಲ್ಲೆಯ 41036 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದು, ನ.15 ಮತ್ತು 16ರಂದು ಜಿಲ್ಲೆಯ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿರುವುದರಿಂದ ರೈತರಲ್ಲಿ ಕೊಯ್ಲಿಗೆ ದಾವಂತ ಶುರುವಾಗಿದೆ.
ಈ ಹಿನ್ನಲೆ ಕಟಾವಿನ ನಂತರ ದಾಸ್ತಾನು ಮಾಡಲು ಜಾಗದ ಕೊರೆತೆ ಉಂಟಾಗುವುದರಿಂದ, ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ರಾಗಿ ಮಾರಿ ರೈತರಿಗಾಗುವ ನಷ್ಟವನ್ನು ದೂರ ಮಾಡಲು ತ್ವರಿತವಾಗಿ ರಾಗಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

