ಹೌದು…! ಕಳೆದ ಎರಡ್ಮೂರು ವರ್ಷಗಳ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಎಂಥವರಿಗೂ ಹೀಗೆ ಅನ್ನಿಸದೇ ಇರದು. ಕರ್ನಾಟಕದ ಪ್ರಬಲ ಒಕ್ಕಲಿಗ ಜನಾಂಗದ ಮತಬ್ಯಾಂಕ್ ಅನ್ನು ದಶಕಗಳಿಂದ ಭದ್ರಪಡಿಸಿಕೊಂಡು ಬಂದಿದ್ದ ಜಾತ್ಯತೀತ ಜನತಾದಳದ ರಾಜಕೀಯ ಹಾದಿ ಬರುಬರುತ್ತಾ ಕೆಲವು ವರ್ಷಗಳಿಂದ ಅಧಃಪತನದತ್ತ ಸರಿಯುತ್ತಿರುವುದು ಆಶ್ಚರ್ಯವಾದರೂ ವಾಸ್ತವ ಸತ್ಯ ಎನಿಸಿದೆ.
ಹೆಸರಿಗಷ್ಟೇ *ಜಾತ್ಯಾತೀತ* ಎಂಬ ಹೆಸರಿದ್ದರೂ ಸಹ ಆ ಪಕ್ಷ ಹುಟ್ಟಿನಿಂದ ಬಹುವಾಗಿ ಅವಲಂಬಿಸಿದ್ದು ಒಕ್ಕಲಿಗರನ್ನು ಮತ್ತು ಲಘುವಾಗಿ ಅವಲಂಬಿಸಿದ್ದು ಅಲ್ಪಸಂಖ್ಯಾತರನ್ನು. ಆರಂಭದಿಂದಲೂ ಒಕ್ಕಲಿಗರ ಅದ್ವಿತೀಯ (ದ್ವಿತೀಯ ನಾಯಕನನ್ನು ಬೆಳೆಯಲೇ ಬಿಟ್ಟಿಲ್ಲ) ನಾಯಕನಾಗಿ, ಮಣ್ಣಿನ ಮಗನಾಗಿ,ರೈತ ಕುಲದ ಆಶಾಕಿರಣವಾಗಿ ಸನ್ಮಾನ್ಯ ದೇವೇಗೌಡರು ತನ್ನ ಪಕ್ಷವನ್ನು ಬಹಳ ನಾಜೂಕಿನಿಂದ, ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು. ಇದಕ್ಕೆಲ್ಲಾ ಬೆನ್ನೆಲುಬಾಗಿ ಸಿಂಧ್ಯಾ, ಪಟೇಲ್ ರಂತಹ ಹಿರಿಯರಿಂದ ಹಿಡಿದು ಸಿದ್ಧರಾಮಯ್ಯ, ದತ್ತಾ ರವರಂತಹ ಸ್ಫಟಿಕ ಚಾತುರ್ಯದ ನಾಯಕರ ದೊಡ್ಡ ಪಡೆಯೇ ನಿಂತಿತ್ತು. ಆ ಕಾಲಘಟ್ಟದಲ್ಲಿ ದೇವೇಗೌಡರ ಒಂದೊಂದು ಹೇಳಿಕೆಗಳೂ ಇಡೀ ಪಕ್ಷದ, ಇಡೀ ರಾಜ್ಯದ ಒಕ್ಕಲಿಗ ಜನಾಂಗದ ಪ್ರತಿಧ್ವನಿಯಂತಿರುತ್ತಿತ್ತು.
ಇವತ್ತು ಬಹುತೇಕ ಕೇಸರಿ ಪಕ್ಷದ ಝಂಡಾ ಹಾರುತ್ತಿರುವ, ಕೇವಲ ಒಂದಂಕಿ ಸ್ಥಾನ ಗಳಿಸಲೂ ಜೆಡಿಎಸ್ ತಿಣುಕಾಡುತ್ತಿರುವ ಉತ್ತರ ಕರ್ನಾಟಕದ ಭಾಗಶಃ ಅಷ್ಟೂ ಕ್ಷೇತ್ರಗಳಲ್ಲಿ ಅಂದಿನ ದಿವಸ ಜೆಡಿಎಸ್ನ ಬಾವುಟಗಳು ಹಾರುತ್ತಿದ್ದವು.. ಹಳೆಯ ಮೈಸೂರು ಭಾಗವಂತೂ ಜೆಡಿಎಸ್ ನ ಅಭೇದ್ಯ ಕೋಟೆಯಂತಾಗಿತ್ತು. ಕರಾವಳಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಹಂಚಿಕೊಂಡಿದ್ದು ಬಿಟ್ಟರೆ, ರಾಜ್ಯದ ಇತರೆಡೆಗಳಲ್ಲಿ ದೇವೇಗೌಡರ ಪಕ್ಷವನ್ನು ಎದುರಿಸುವ ಸಾಮರ್ಥ್ಯ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಇರಲಿಲ್ಲವೆಂದರೆ ನಾವು ನಂಬಲೇಬೇಕು. ಇಷ್ಟೊಂದು ವೈಭವೋಪೇತ ಇತಿಹಾಸವುಳ್ಳ ಜಾತ್ಯಾತೀತ ಜನತಾದಳ 2008 ರಿಂದೀಚೆಗೆ ಕಾಲ ಕ್ರಮೇಣ ಒಂದೊಂದೇ ಸ್ಥಾನವನ್ನು ಬೊಗಸೆಯಲ್ಲಿನ ಬೆರಳ ಸಂದಿಯ ನೀರಿನಂತೆ ಕೈ ಚೆಲ್ಲುತ್ತಿರುವುದ್ಯಾಕೆ!!?
ಹಾಗಾದರೆ ಜೆಡಿಎಸ್ ಎಡವಿದ್ದಾದರೂ ಎಲ್ಲಿ!?!? ಎಂಬ ಪ್ರಶ್ನೆಗೆ ಉತ್ತರ…ಕೌಟುಂಬಿಕ ಸ್ವಹಿತಾಸಕ್ತಿ ಹಾಗೂ ಅತಿಯಾದ ಅಲ್ಪಸಂಖ್ಯಾತರ ಓಲೈಕೆ. ಹೌದು, 2004 ರಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಸರ್ಕಾರ ರಚಿಸಬೇಕಾದ ಸಂದರ್ಭದಲ್ಲಿ ದೇವೇಗೌಡರು ಮನಸ್ಸು ಮಾಡಿದ್ದರೆ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ *ಕೈಕಮಾಂಡ್* ಮರ್ಜಿಗೆ ಒಳಗಾಗಿ ಉಪಮುಖ್ಯಮಂತ್ರಿ ಸ್ಥಾನ ಪಡೆದು ಮೈತ್ರಿ ಮಾಡಿಕೊಂಡರು. ಪಾಲಿಗೆ ಬಂದದ್ದು ಪಂಚಾಮೃತ ಎಂಬ ತತ್ವ ಪಾಲಿಸಿ ಬಂದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಸಿದ್ಧರಾಮಯ್ಯನವರು ದಕ್ಷತೆಯಿಂದಲೇ ಆಡಳಿತ ಕೊಟ್ಟರು.
ಆದರೆ ಅದು ಕೇವಲ ಎರಡು ವರ್ಷಗಳಲ್ಲೇ ಕೊನೆಯಾಯಿತು. ಅದಕ್ಕೆ ಕಾರಣ ಅವರದ್ದೇ ಪಕ್ಷದ ಕುಮಾರಸ್ವಾಮಿಯವರು. ಹೌದು… ಆಗ ತಾನೇ ಪ್ರಥಮ ಬಾರಿಗೆ ರಾಮನಗರದಿಂದ ಶಾಸಕರಾಗಿದ್ದ ಕುಮಾರಸ್ವಾಮಿಯವರು “ಮುಖ್ಯಮಂತ್ರಿಯಾಗುವಾಸೆಯಿಂದ” ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಂಡು ತಮ್ಮ ಶಾಸಕರನ್ನೆಲ್ಲಾ ತುಂಬಿಕೊಂಡು ಗೋವಾದಲ್ಲಿ ಬೀಡುಬಿಟ್ಟು ಇಡೀ ದೇಶದ ರಾಜಕೀಯ ಇತಿಹಾಸದಲ್ಲಿ *ರೆಸಾರ್ಟ್ ರಾಜಕಾರಣ* ಕ್ಕೆ ನಾಂದಿ ಹಾಡಿದರು. ನಂತರ ದೇವೇಗೌಡರ ವಿರೋಧದ(ಮೇಲ್ನೋಟಕ್ಕೆ) ನಡುವೆಯೂ ಬಿಜೆಪಿಯ ಜೊತೆಗೆ ಕೈ ಜೋಡಿಸಿ 20:20 ಆಧಾರದ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಆಗೇಬಿಟ್ಟರು. ಆಗಲೇ ನೋಡಿ ಸಿದ್ಧರಾಮಯ್ಯನವರು ಸಿಡಿದೆದ್ದದ್ದು. ದೇವೇಗೌಡರ ಪುತ್ರ ವಾತ್ಸಲ್ಯದ ಮುಂದೆ ದಶಕಗಳ ಕಾಲ ಶುದ್ಧ ರಾಜಕಾರಣದ ಅನುಭವ ಹಾಗೂ ಹೋರಾಟದ ಹಿನ್ನೆಲೆಯ ಸಿದ್ಧರಾಮಯ್ಯನವರ *ಅರ್ಹತೆ* ಮೂಲೆಗುಂಪಾಯಿತು. ಇದರಿಂದ ಸಹಜವಾಗಿಯೇ ಆಕ್ರೋಶಗೊಂಡ ಸಿದ್ಧರಾಮಯ್ಯನವರು ಭತ್ತದ ಹೊರೆ ಇಳಿಸಿ ಹಸ್ತ ಹಿಡಿದರು.ಇದು ದೇವೇಗೌಡರ ಪಕ್ಷಕ್ಕೆ ಬಿದ್ದ ಮೊದಲ ಪೆಟ್ಟು.
ಆ ಸಮಯದಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ‘ಅನನುಭವಿ’ ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ನೀಡಿದ ಇಪ್ಪತ್ತು ತಿಂಗಳು ನೀಡಿದ ಆಡಳಿತವು ಕರ್ನಾಟಕದ ಭೂತ-ಭವಿಷ್ಯಗಳಲ್ಲಿ ಯಾರೂ ನೀಡಿರದ, ನೀಡಲು ಕಷ್ಟಸಾಧ್ಯವಾದ ಆಡಳಿತ ಎಂದರೆ ತಪ್ಪಾಗಲಾರದು, ಅದು ಸತ್ಯವೂ ಹೌದು. ಅದೃಷ್ಟವಶಾತ್ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ನೀಡಿದ ಆ ಕಡಿಮೆ ಅವಧಿಯ ಆಡಳಿತ ಅವರನ್ನು ರಾಜ್ಯದ ಜನಮಾನಸದಲ್ಲಿ *ಕುಮಾರಣ್ಣ* ನನ್ನಾಗಿ ಅಚ್ಚಿಳಿಸಿದ್ದು ಸುಳ್ಳಲ್ಲ. ಕುಮಾರಸ್ವಾಮಿಯವರ ನಂತರ ಒಪ್ಪಂದದ ಪ್ರಕಾರ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಗಿತ್ತು. ಆದರೆ ರಾಜಕಾರಣದ ಸಾಂಪ್ರದಾಯಿಕ ಚತುರ ದೇವೇಗೌಡರ ದಾಳ ಮತ್ತು ಮೊಂಡು ಹಠದ ಮುಂದೆ ಕುಮಾರಸ್ವಾಮಿಯ ಪ್ರಾಮಾಣಿಕತೆ ಮಂಡಿಯೂರಿತ್ತು. ದೇವೇಗೌಡರ ಮಾತಿಗೆ ಕಟ್ಟುಬಿದ್ದ ಕುಮಾರಸ್ವಾಮಿಯವರು ಒಪ್ಪಂದ ಮುರಿದು ಮೈತ್ರಿಯಿಂದ ಹಿಂದೆ ಸರಿದರು. ಇದರಲ್ಲಿ ದೇವೇಗೌಡರ ಲೆಕ್ಕಾಚಾರವೇ ಬೇರೆ ಇತ್ತು. ಇಪ್ಪತ್ತು ತಿಂಗಳು ಕುಮಾರಸ್ವಾಮಿ ನೀಡಿದ ಆಡಳಿತದ ಜನಪ್ರಿಯತೆ ಈಗಲೇ ಚುನಾವಣೆಗೆ ಹೋದರೆ ಬಹುಮತದೊಂದಿಗೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ ಎಂಬ ಭ್ರಮೆಯಲ್ಲಿದ್ದರು. ಭ್ರಮೆ ಯಾಕೆಂದರೆ, ಒಂದು ತಂಬಿಗೆ ಹಾಲಿಗೆ ಒಂದೇ ಒಂದು ಹನಿ ವಿಷ ಬಿದ್ದರೂ ಅದನ್ನು ಯಾರೂ ಹಾಲು ಎನ್ನುವುದಿಲ್ಲ. ಬದಲಿಗೆ ಅದು ವಿಷವೇ ಎನಿಸಿಕೊಳ್ಳುತ್ತದೆ. 2008 ರ ಚುನಾವಣೆಯಲ್ಲಿ ಆಗಿದ್ದೂ ಅದೇ… ಚುನಾವಣೆಯ ಸಮಯದಲ್ಲಿ ಜೆಡಿಎಸ್ನಿಂದ ಹಲವು ಶಾಸಕರು ಕಾಂಗ್ರೆಸ್ ಕಡೆಗೆ ಪೆರೇಡ್ ನಡೆಸಿದರು. ಕುಮಾರಸ್ವಾಮಿಯವರ *ವಚನ ಭ್ರಷ್ಟತೆ* ಯನ್ನೇ ಬಂಡವಾಳ ಮಾಡಿಕೊಂಡ ಯಡಿಯೂರಪ್ಪ ಚುನಾವಣೆ ಗೆದ್ದು ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿಯಾಗೇ ಬಿಟ್ಟರು. ಅಲ್ಲಿಯವರೆಗೂ ಬಲಿಷ್ಠವಾಗಿದ್ದ ಜೆಡಿಎಸ್ ಪಕ್ಷವು ತನ್ನ ಹತ್ತಿಪ್ಪತ್ತು ಶಾಸಕರನ್ನು ಕಳೆದುಕೊಂಡು ಹೈರಾಣಾಗಿ ಇಪ್ಪತ್ತೆಂಟು ಕ್ಷೇತ್ರಕ್ಕಷ್ಟೇ ತೃಪ್ತಿ ಪಡಬೇಕಾಯಿತು. ನಂತರದ 2013 ರ ಚುನಾವಣೆಯಲ್ಲಿ ಹಂಗೂ ಹಿಂಗೂ ಸರ್ಕಸ್ ಮಾಡಿ, ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಲಾಭ ಪಡೆದು ನಲವತ್ತಕ್ಕೇರಿತಾದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಯಾಕೆಂದರೆ, ಒಂದೆಡೆ ಬಿಜೆಪಿಯ ಭ್ರಷ್ಟಾಚಾರದ ಲಾಭ ಪಡೆದು, ಇನ್ನೊಂದೆಡೆ ಸಿದ್ಧರಾಮಯ್ಯನವರ ಹಠ,ಚಾಣಾಕ್ಷತನದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಹದಿನೈದು ವರ್ಷಗಳ ನಂತರ ಬಹುಮತದೊಂದಿಗೆ ಸರ್ಕಾರ ರಚಿಸಿಬಿಟ್ಟಿತ್ತು. ಇದಾದ ಬಳಿಕ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಕುಮಾರಸ್ವಾಮಿಯವರು ಅಭ್ಯರ್ಥಿಯಿಂದ ನಲವತ್ತು ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದು ನಂತರ ಅದನ್ನು ನೇರವಾಗಿ ಅವರೇ ಒಪ್ಪಿಕೊಂಡಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತಲ್ಲದೇ ಪಕ್ಷದ ವರ್ಚಸ್ಸನ್ನು ಸ್ವಲ್ಪ ಮಟ್ಟಿಗೆ ಕುಂದಿಸಿತ್ತು. ನಂತರದ 2018 ರ ಚುನಾವಣಾ ಹೊಸ್ತಿಲಿನಲ್ಲಿ ಪಕ್ಷದ ಎಂಟು ಜನ
ಮೇಲ್ಸ್ತರದ ನಾಯಕರು ತೆನೆ ಇಳಿಸಿ ಹಸ್ತ ಹಿಡಿದರು. ಇದು ಜೆಡಿಎಸ್ಗೆ ಮೂರನೇ ಪೆಟ್ಟು ಕೊಟ್ಟಿತ್ತು. ತದನಂತರ ಚುನಾವಣಾ ಕಣ ರಂಗೇರುವ ಸಮಯದಲ್ಲಿ ತಮ್ಮದೇ ಕುಟುಂಬದ ಸದಸ್ಯರೊಬ್ಬರು ತಮ್ಮ ಪಕ್ಷದಲ್ಲಿ ಸೂಟ್ಕೇಸ್ ರಾಜಕಾರಣ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿದ್ದು ಪಕ್ಷದ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಯಿತು.
ನಿಜವಾದ ರಾಜಕೀಯ ನಾಟಕಗಳು ಶುರುವಾಗಿದ್ದೇ ಇಲ್ಲಿಂದ. ಚುನಾವಣಾ ಭಾಷಣಗಳಲ್ಲಿ ಒಂದೆಡೆ ಕುಮಾರಸ್ವಾಮಿಯವರು ಗಳಗಳನೆ ಕಣ್ಣೀರಧಾರೆ ಹರಿಸುತ್ತಾ ಜಾಸ್ತಿ ದಿನ ಬದುಕಲ್ಲ ಅಂತೆಲ್ಲಾ ಹೇಳಿ ಮತದಾರರಲ್ಲಿ ಮನವಿ ಮಾಡುವ ರಾಜಕಾರಣ ಶುರುಮಾಡಿದರು. ನಿಜವಾಗಿಯೂ ಮತದಾರ ಎಚ್ಚೆತ್ತುಕೊಂಡಿದ್ದು ಇಲ್ಲಿಯೇ. ಆಗ ನಡೆದ ಚುನಾವಣೆಯಲ್ಲಿ ಮತದಾರ ಪ್ರಭು ಜೆಡಿಎಸ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಕಳೆದ ಅವಧಿಯ ಓಲೈಕೆಯ ತಪ್ಪುಗಳಿಗೆ ಪ್ರಾಯಶ್ಚಿತ್ತ ಕಲ್ಪಿಸಿ, ಬಿಜೆಪಿಯನ್ನು ಗೆಲುವಿನ ಅಂಚಿಗೆ ತಂದು ಬಿಟ್ಟು ಪರೋಕ್ಷವಾಗಿ ಬಿಜೆಪಿಗೂ ಚಾಟಿ ಬೀಸಿದ್ದ.
ಆದರೆ ಸ್ಪಷ್ಟ ಬಹುಮತವಿಲ್ಲದ ಯಡಿಯೂರಪ್ಪ ನೇತೃತ್ವದ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೆ, ಹಾವು-ಮುಂಗುಸಿಯಂತಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡರು. ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲೋ ಸುಗವಾಗಿಯೋ ಅಥವಾ ತನ್ನ ಹಿಂದಿನ ಅವಧಿಯ ತಪ್ಪುಗಳನ್ನ ಸಾರಿಸಿಕೊಳ್ಳಲೋ ಏನೋ ಎಪ್ಪತ್ತೆಂಟು ಸೀಟು ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಮೂವತ್ತೇಳು ಸೀಟು ಗೆದ್ದ ದೇವೇಗೌಡರ ಮುಂದೆ ಮಂಡಿಯೂರಿ ಕುಳಿತು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಮೈತ್ರಿ ಮಾಡಿಕೊಂಡಿತ್ತು. ಅಂತೂ ಇಂತೂ ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿ ಆಗೇಬಿಟ್ಟರು.
ಆಸೆಕಂಗಳಿಂದ ಕುಮಾರಸ್ವಾಮಿಯತ್ತ ನೋಡುತ್ತಿದ್ದ ಜನತೆಗೆ ಬಹುದೊಡ್ಡ ನಿರಾಸೆಗಳು ಕಾದಿದ್ದವು. ಯಾಕೆಂದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯಾಗಿದ್ದರೂ,, ಆ ಕುರ್ಚಿಯ ರಿಮೋಟ್ ಕಂಟ್ರೋಲ್ ಸಿದ್ಧರಾಮಯ್ಯನವರ ಬಳಿ ಇತ್ತು. ಈ ವಿಚಾರವನ್ನು ಬಹಳಷ್ಟು ಬಾರಿ ಸ್ವತಃ ಕುಮಾರಸ್ವಾಮಿ ಮ ಹೇಳಿಕೊಂಡಿದ್ದರು. ನಂತರ ಬಂದ ಲೋಕಸಭಾ ಚುನಾವಣೆಯಲ್ಲಿ ಇದೇ ಮೈತ್ರಿ ಮುಂದುವರೆದು, ಜೆಡಿಎಸ್ ತನ್ನ ಪಾಲಿಗೆ ಬಂದಿದ್ದ ಏಳು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ತಮ್ಮ ಕುಟುಂಬದವರಿಗೇ ಟಿಕೆಟ್ ನೀಡಿದ್ದು ಸಹಜವಾಗಿಯೇ ಮತದಾರನಿಗೆ ಅಸಡ್ಡೆ ಮೂಡಿಸಿತ್ತು. ಇದರೊಳಗೊಂದು ಗುಟ್ಟೂ ಇತ್ತು. ಒಟ್ಟಾರೆ ದೇವೇಗೌಡರ ಕುಟುಂಬದ ಸದಸ್ಯರುಗಳು ಸ್ಪರ್ಧಿಸಿದ್ದ ಮೂರೂ ಕ್ಷೇತ್ರಗಳಲ್ಲಿ ಸಿದ್ಧರಾಮಯ್ಯನವರು ತೆರೆಮರೆಯಲ್ಲಿ ಕೈಯಾಡಿಸಿ, ಹನ್ನೆರಡು ವರ್ಷಗಳ ಸೇಡನ್ನು ತೀರಿಸಿಕೊಂಡಿದ್ದರು. ಅಂತೂ ದೇವೇಗೌಡರು ಸೋತು ಸುಣ್ಣವಾದರು. ದೇವೇಗೌಡರ ಯಾವ ಕಣ್ಣೀರಿನ ನಾಟಕಗಳೂ ಮಾಧುಸ್ವಾಮಿಯವರ ವಾಕ್ಚಾತುರ್ಯ ಹಾಗೂ ಮೋದಿ ಸುನಾಮಿಯ ಮುಂದೆ ನಿಲ್ಲಲಿಲ್ಲ. ಇದಾದ ಮೇಲೆ ಒಂದು ವರ್ಷದ ನಂತರ ರಾಜಕೀಯ ಧೃವೀಕರಣಗಳಾಗಿ ಕುಮಾರಸ್ವಾಮಿ ಪದತ್ಯಾಗವಾಗಿ ಯಡಿಯೂರಪ್ಪ ಗಾದಿಯೇರಿದರು.ಅದೀಗ ಇತಿಹಾಸ.
ಇದಾದ ಮೇಲೆ ವಿಧಾನ ಪರಿಷತ್ ಸ್ಥಾನಗಳಿಗೆ ಪ್ರಾಮಾಣಿಕ, ಅರ್ಹ ನಾಯಕರು ತಮ್ಮಲ್ಲಿಯೇ ಇದ್ದರೂ ಅಂತಹ ಸೀಟುಗಳು ಜೆಡಿಎಸ್ ಪಕ್ಷದ “ಉಳ್ಳವರ” ಪಾಲಾದವು. ಹಲವು ಸಂದರ್ಭಗಳಲ್ಲಿ ದೇವೇಗೌಡರ
*ಇಸ್ಲಾಂ ಪ್ರೀತಿ* ಸಹಜವಾಗಿ ಹಿಂದೂ ಮತಗಳು ಜೆಡಿಎಸ್ನಿಂದ ಹಿಂದೆ ಸರಿಯಲು ಕಾರಣವಾದವು. ಸ್ವತಂತ್ರವಾಗಿ ಎದ್ದು ನಿಲ್ಲಲೂ ಆಗದ ದೇವೇಗೌಡರು ಮತ್ತೆ ರಾಜಕಾರಣದ ಲಾಲಸೆಗೋ, ಮಕ್ಕಳ ಮುಂದಿನ ಅಧಿಕಾರಕ್ಕೋ, ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕೋ ಏನೋ ಸ್ವಪಕ್ಷೀಯರ ವಿರೋಧದ ನಡುವೆಯೂ ರಹಸ್ಯ ಲೆಕ್ಕಾಚಾರ ಹಾಕಿಕೊಂಡು ರಾಜ್ಯಸಭೆ ಪ್ರವೇಶಿಸಿದರು. ಒಟ್ಟಾರೆ ದೇವೇಗೌಡರ ಸ್ವಾರ್ಥ ಸ್ವಹಿತಾಸಕ್ತಿ, ಕೌಟುಂಬಿಕ ರಾಜಕಾರಣ, ಪ್ರಮಾಣಿಕರ ಕಡೆಗಣನೆ, ಮಕ್ಕಳ, ಮೊಮ್ಮಕ್ಕಳ ಅಹಂಭಾವದ ಕಾರಣದಿಂದ ದಶಕಗಳ ನಂತರ ರಾಜ್ಯದಲ್ಲಿ ಜೆಡಿಎಸ್ನ ವರ್ಚಸ್ಸು ತೀವ್ರ ಕುಸಿದಿದ್ದು, ಪಕ್ಷ ಅವನತಿಯತ್ತ ಸಾಗುತ್ತಿರುವುದಂತೂ ಅಲ್ಲಗಳೆಯಲಾಗದ
*ಬೆತ್ತಲೆ ಸತ್ಯ*.
ಇದರ ಜೊತೆಗೆ ಪ್ರಸ್ತುತ ಬಿಜೆಪಿ ಸರ್ಕಾರ ಏನಾದರೂ ಆಡಳಿತ ವಿರೋಧಿ ಅಲೆಗೆ ಸಿಕ್ಕಿ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದರೆ, ಜೆಡಿಎಸ್ ಪಕ್ಷವು ಹಿಂದಿನಂತೆಯೇ ಕನಿಷ್ಠ ಸೀಟು ಗೆದ್ದರೂ ಅಧಿಕಾರ ಹಿಡಿದರೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ, ಹದಿನೈದು ಸೀಟು ಗೆದ್ದು ದೇಶಕ್ಕೇ ಪ್ರಧಾನಿಯಾದ ಚಾಣಾಕ್ಷರಿಗೆ, ಹತ್ತಿಪ್ಪತ್ತು ಸೀಟು ಗೆದ್ದು ರಾಜ್ಯದ ಗದ್ದುಗೆ ಏರುವುದು ಕಷ್ಟವೇನೂ ಅಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯ. ಏನೇ ಆದರೂ ಕರ್ನಾಟಕದ ಜನತೆ ಜೆಡಿಎಸ್ ಪಕ್ಷವನ್ನು ನಿಧಾನವಾಗಿ ನೇಪಥ್ಯಕ್ಕೆ ಸರಿಸುತ್ತಿದ್ದಾರೆ ಎಂಬುದಂತೂ ಸುಳ್ಳಲ್ಲ…..ಇಂತಿ ನಿಮ್ಮವ ಜಿ.ಎನ್.ಪ್ರದೀಪ್
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

