ಬೆಂಗಳೂರು: ಅಧಿಕಾರಿಗಳು ಜನಸ್ಪಂದನೆಯಿಂದ ಕಾರ್ಯನಿರ್ವಹಿಸಿ, ಸೂಕ್ತ ಹಾಗೂ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ 2ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಜನ ಹಿತಾಸಕ್ತಿ ಮೇರೆಗೆ ಕಾರ್ಯ ನಿರ್ವಹಿಸಲು ತಿಳಿಸಿದರಲ್ಲದೆ, ಹಿಂದಿನ ಸಭೆಯ ಸೂಚನೆಯಂತೆ ತಾಲ್ಲೂಕು ಮಟ್ಟದಲ್ಲಿ, ಉಪ ವಿಭಾಗಗಳಲ್ಲಿ ಸಭೆ ನಡೆಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಸ್ಯೆಗಳು ಮೂಲದಲ್ಲಿಯೇ ಪರಿಹಾರವಾಗಬೇಕಾದರೆ ತಾಲ್ಲೂಕು ಮಟ್ಟ, ಉಪ ವಿಭಾಗ ಮಟ್ಟದಲ್ಲಿ ಸಭೆಗಳಾಗುವುದು ಮುಖ್ಯವೆಂದು ತಿಳಿಸಿದರು.
ನ್ಯಾಯಾಂಗದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಪ್ರಕರಣಗಳನ್ನು ದೌರ್ಜನ್ಯ ಪ್ರಕರಣಗಳನ್ನು ಸಕಾಲದಡಿ ಈಗಾಗಲೇ ಸೇರಿಸಲಾಗಿದ್ದು, ಸಮಿತಿ, ಸಭೆಗಳು ಇರುವುದೇ ದೌರ್ಜನ್ಯವಾಗದಿರುವಂತೆ ತಡೆಗಟ್ಟಲು ಹಾಗೂ ಈಗಾಗಲೇ ನಡೆದಿರುವ ದೌರ್ಜನ್ಯಗಳಿಗೆ ಪರಿಹಾರ ಒದಗಿಸಲು ಎಂದರಲ್ಲದೆ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉತ್ತಮ ಸ್ಪಂದನೆಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದಲೇ ಉತ್ತಮ ಆಡಳಿತ ನಡೆಸಲು ಸಾಧ್ಯವಾಗಿದೆ ಎಂದರು.
ನ್ಯಾಯಾಂಗದಲ್ಲಿರುವ ಸರ್ಕಾರಿ ಜಮೀನುಗಳ ಕುರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸರ್ಕಾರಿ ವಕೀಲರನ್ನು ಭೇಟಿಯಾಗಿ ದಾಖಲೆಗಳನ್ನು ಒದಗಿಸಿ, ಸರ್ಕಾರದ ಸ್ವತ್ತೆಂದು ವಾದ ಮಂಡಿಸಿ, ತಡೆಯಾಜ್ಞೆ ತೆರವುಗೊಳಿಸಲು ಕ್ರಮವಹಿಸಿ ಎಂದು ತಿಳಿಸಿದರು.
ನೆರೆ ರಾಜ್ಯಗಳಾದ ಒರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶದವರ ಹೆಸರಲ್ಲಿ ನಿವೇಶನಗಳಿವೆ, ಮೂಲ ನಿವಾಸಿಗಳಿಗೆ ಮನೆಯಿಲ್ಲ ಎಂದು ಜಾಗೃತಿ ಸಮಿತಿ ಸದಸ್ಯರೋರ್ವರು ಕೇಳಿದಾಗ ನಿವೇಶನಗಳು ಖಾಲಿಯಿದ್ದು, ಬೋಗಸ್ ದಾಖಲೆಗಳನ್ನು ಸೃಷ್ಟಿ ಮಾಡಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಹಾಗೂ ಖಾಲಿ ನಿವೇಶನಗಳಲ್ಲಿ ಮಂಜೂರಾತಿ, ಅಧಿಕೃತ, ಅನಧಿಕೃತ ಮನೆ ನಿರ್ಮಾಣದ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಪೂರ್ಣ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಗಣೇಶ್ ಅವರು ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ನಿರಂತರವಾಗಿ ಹಾಗೂ ನೇರವಾಗಿ ಸಂಪರ್ಕದಲ್ಲಿದ್ದೇವೆಂದು ತಿಳಿಸಿದರಲ್ಲದೆ, ಸಾಕ್ಷ್ಯಾಧಾರಗಳ ವಿಡಿಯೋಗ್ರಫಿ ಮಾಡಲಾಗುತ್ತದೆ ಎಂದರು ಹಾಗೂ ದೌರ್ಜನ್ಯ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರದ ಡಿವೈಎಸ್ಪಿ ಟಿ.ರಂಗಪ್ಪ ಅವರು ಮಾತನಾಡಿ,ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ದಾರಿ ತಪ್ಪದಂತೆ, ಬಾಲ್ಯ ವಿವಾಹವಾಗದಂತೆ, ಶಿಕ್ಷಣದ ಮಹತ್ವದ ಕುರಿತು ವಿವಿಧ ಇಲಾಖೆಯವರು ಹಾಗೂ ಜಾಗೃತಿ ಸಮಿತಿ ಸದಸ್ಯರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪೋಕ್ಸೋ ಕಾಯ್ದೆಯಡಿ ದಾಖಲಾಗುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಹಕರಿಸಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ:ಜಗದೀಶ್.ಕೆ.ನಾಯಕ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕರಿಯಪ್ಪ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳ್ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹನುಮಂತರಾಯಪ್ಪ, ತಾಲ್ಲೂಕುಗಳ ಡಿವೈಎಸ್ಪಿಗಳು, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್ಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

