ದೊಡ್ಡಬಳ್ಳಾಪುರ: ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡುವಾಗ ಇರುವಷ್ಟೇ ಕಾಳಜಿ ಹಣ ಕಾಸಿನ ನಿರ್ವಹಣೆ ಮಾಡುವಾಗಲು ವಹಿಸಬೇಕು ಎಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ನಗರ ಶಾಖೆ ವ್ಯವಸ್ಥಾಪಕ ಅಶ್ವತ್ಥ್ನಾರಾಯಣ ಹೇಳಿದರು.
ಅವರು ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಮಂಗಳವಾರ ದಾನ್ ಪೌಂಡೇಷನ್ ರಾಮನಗರ ವಲಯದ ವತಿಯಿಂದ ನಡೆದ ದೊಡ್ಡಬಳ್ಳಾಪುರ ಮಹಿಳಾ ಕಳಂಜಿಯ ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕಳಂಜಿಯ ಸಂಘದ ಮಾರ್ಗದರ್ಶದಲ್ಲಿ ರಚನೆಯಾಗಿರುವ ಸ್ವಸಹಾಯ ಮಹಿಳಾ ಸಂಘಗಳಿಗೆ ಆರ್ಥಿಕ ನಿರ್ವಹಣೆ, ಲೆಕ್ಕಪತ್ರಗಳನ್ನು ಬರೆಯುವುದು ಸೇರಿದಂತೆ ಸಾಕಷ್ಟು ತರಬೇತಿಗಳನ್ನು ನೀಡಲಾಗುತ್ತದೆ. ಇದಾದ ನಂತರವೇ ಮಹಿಳಾ ಗುಂಪುಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಮಹಿಳಾ ಗುಂಪುಗಳು ಒಂದು ಗುರಿ, ಉದ್ದೇಶವನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯವಾಗಲಿದೆ. ಸಂಘಗಳು ಬ್ಯಾಂಕಿನಿಂದ ಸಾಲ ಪಡೆಯುವುದಕ್ಕೇ ಮಾತ್ರ ಸೀಮಿತವಾಗದೆ ಕೌಶಲ್ಯದ ತರಬೇತಿಗಳನ್ನು ಪಡೆದು ಸ್ವಯಂ ಉದ್ಯೋಗಿಗಳಾಗುವ ಕಡೆಗೆ ಮುನ್ನಡೆಯಬೇಕು. ಸಾಲ ಸೌಲಭ್ಯ ಪಡೆಯುವಾಗ ಗುಂಪಿನಲ್ಲಿ ಎಲ್ಲರು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೊರಗಿನವರು ಸಂಘದ ಹಣಕಾಸಿನ ವಿಚಾರದಲ್ಲಿ ಭಾಗಿಯಾಗದಂತೆ ನೋಡಿಕೋಳ್ಳಬೇಕಿದೆ ಎಂದರು.
ಬೆಂಗಳೂರಿನ ನಾರಾಯಣ ಆಸ್ಪತ್ರೆಯ ಸಿಎಸ್ಆರ್ ವಿಭಾಗದ ಮುತ್ತುರಾಜ್ ಮಾತನಾಡಿ, ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ತನ ಕ್ಯಾನ್ಸ್ರ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಹಿಳೆಯರು ಕಡ್ಡಾಯವಾಗಿ ಸ್ತನ ಕ್ಯಾನ್ಸ್ರ್ ತಪಾಸಣೆ ಮಾಡಿಸಿಕೊಳ್ಳಬೇಕು. ನಾರಾಯಣ ಆಸ್ಪತ್ರೆ ಸ್ತನ ಕ್ಯಾನ್ಸ್ರ್ ಪರೀಕ್ಷೆಯನ್ನು ಉಚಿತವಾಗಿ ನಡೆಸುತ್ತಿದೆ ಎಂದರು.
ಸಭೆಯಲ್ಲಿ ದಾನ್ ಪೌಂಡೇಷನ್ ರಾಮನಗರ ವಲಯದ ಸಂಯೋಜಕಿ ನಾಗರತ್ನ, ಸುಕನ್ಯ, ಮುಲಿನ್ತಾಜ್, ಕೆಂಪಮ್ಮ, ನರಸಿಂಹಮೂರ್ತಿ, ರವಿಕುಮಾರ್ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

