
ದೊಡ್ಡಬಳ್ಳಾಪುರ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಬಳಿ ಕಲ್ಲು ಗಣಿಯಲ್ಲಿ ನಡೆದ ಸ್ಪೋಟದ ಹಿನ್ನೆಲೆಯಲ್ಲಿ ಮಂಗಳವಾರ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ನಡೆಯುತ್ತಿರುವ ಕಲ್ಲುಗಣಿಕಾರಿಕೆ ಪ್ರದೇಶಗಳಿಗೆ ಡಿವೈಎಸ್ಪಿ ಟಿ.ರಂಗಪ್ಪ ಮಂಗಳವಾರ ಭೇಟಿ ನೀಡಿ ಕಲ್ಲು ತೆಗೆಯುವ ಸ್ಥಳದಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಮೂರು ಸ್ಥಳಗಳಲ್ಲಿ,ದೇವನಹಳ್ಳಿ ತಾಲ್ಲೂಕಿನಲ್ಲಿ 11 ಸ್ಥಳಗಳಲ್ಲಿ ಮಾತ್ರ ಅಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಇಲ್ಲಿನ ಕಲ್ಲು ಗಣಿಯಲ್ಲಿ ಮನೆ ಕಟ್ಟಡ, ರಸ್ತೆಗಳ ನಿರ್ಮಾಣಕ್ಕೆ ಅಗತ್ಯ ಇರುವ ಎಂಸ್ಯಾಂಡ್ ಹಾಗೂ ಜಲ್ಲಿ ಕಲ್ಲುಗಳನ್ನು ಮಾಡಲಾಗುತ್ತಿದೆ. ಭೂಮಿಯಿಂದ ಕಲ್ಲು ತೆಗೆಯಲು ಸಂದರ್ಭದಲ್ಲಿ ಭಾರಿ ಶಬ್ಧ ಹಾಗೂ ಕಲ್ಲು ತೆಗೆಯುವ ಸುತ್ತಮುತ್ತಲಿನ ಗ್ರಾಮಗಳ ಮನೆಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಎಚ್ಚರ ವಹಿಸಬೇಕಿದೆ. ಕಲ್ಲಿನ ಸ್ಪೋಟಕ್ಕೆ ಬಳಸುವ ವಸ್ತುಗಳನ್ನು ಅಧಿಕೃತ ಪರವಾನಿಗಿದಾರರಿಂದಲೇ ಖರೀದಿಸುವಂತೆಯು ಸೂಚನೆ ನೀಡಲಾಗಿದೆ ಎಂದರು.
ಈಗ ನಡೆಯುತ್ತಿರುವ ಕಲ್ಲು ಗಣಿಗಳಲ್ಲಿ ಬಹುತೇಕ ಸುರಕ್ಷಿತ ನಿಯಮಗಳನ್ನು ಪಾಲಿಸುತ್ತಿರುವುದು ಕಂಡು ಬಂದಿದೆ. ಆದರೆ ಕಲ್ಲು ಗಣಿ ನಡೆಯುತ್ತಿರುವ ಗ್ರಾಮಗಳ ಸುತ್ತಲಿನ ನಿವಾಸಿಗಳು ದೊಡ್ಡ ಪ್ರಮಾಣದಲ್ಲಿ ಸ್ಫೋಟಗಳನ್ನು ನಡೆಸುತ್ತಿರುವ ಬಗ್ಗೆ ದೂರುತ್ತಿದ್ದಾರೆ. ಈ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಸರ್ಕಲ್ ಇನ್ಸ್ಪೆಕ್ಟರ್ ಡಾ.ಮಲ್ಲಿಕಾರ್ಜನ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

