
ದೊಡ್ಡಬಳ್ಳಾಪುರ: ಹೆಣ್ಣೂರು ಲಕ್ಷ್ಮೀನಾರಾಯಣರವರ ಸಾರಥ್ಯದಲ್ಲಿ ನ್ಯಾ.ಸದಾಶಿವ ವರದಿ ಜಾರಿಗೆಗಾಗಿ ವಿರಾಟ್ ಶಕ್ತಿ ಪ್ರದರ್ಶನ ಹಾಗೂ ಮಾದಿಗರ ಚೈತನ್ಯ ರಥ ಯಾತ್ರೆಯನ್ನು ನಗರದ ಪ್ರವಾಸಿ ಮಂದಿರದ ಬಳಿ ಮದಾರ ಚನ್ನಯ್ಯ ಮಹಾಸಭಾ ಪದಾಧಿಕಾರಿಗಳು ಅದ್ದೂರಿ ಸ್ವಾಗತ ಕೋರಿದರು.
ನ್ಯಾ.ಸದಾಶಿವ ವರದಿ ಜಾರಿಗೆಗಾಗಿ ವಿರಾಟ್ ಶಕ್ತಿ ಪ್ರದರ್ಶನ ಹಾಗೂ ಮಾದಿಗ ಚೈತನ್ಯ ರಥ ಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇಂದು ನಗರಕ್ಕೆ ತಲುಪಿತು.
ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತಾನಾಡಿದ ಮಾದರ ಚನ್ನಯ್ಯ ಮಹಾ ಸಭಾದ ಕೋರ್ ಕಮಿಟಿ ಅಧ್ಯಕ್ಷ ಮಾ.ಮುನಿರಾಜು, ಸಮಾಜದಲ್ಲಿ ಅಸ್ಪುರ್ಷ್ಯತೆ ಮತ್ತು ಶೋಷಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಮತ್ತು ಶೋಷಣೆ ನಿಲ್ಲಬೇಕಿದೆ ಹಾಗೂ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಬೇಕಿದೆ.
ಸಮಾಜದಲ್ಲಿ ಒಲೆಯ ಮತ್ತು ಮಾದಿಗರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಮಾ.8ರಂದು ನಡೆಯುವ ಬೃಹತ್ ಚಳುವಳಿಗೆ ಎಲ್ಲಾ ಮಾದಿಗ ಮತ್ತು ಶೋಷಿತವರ್ಗದವರು ಪಾಲ್ಗೊಳ್ಳಬೇಕು. ಎಲ್ಲರೂ ಕೈಜೋಡಿಸಿ ಈ ವರದಿ ಜಾರಿಗೆಗೆ ಒತ್ತಾಯಿಸಬೇಕು. ಒಳ ಮೀಸಲಾತಿಗೆ ಎಲ್ಲಾ ದಲಿತ ಜಾತಿಗಳ ಮುಖಂಡರು ಬೆಂಬಲ ನೀಡಬೇಕು ನಮ್ಮ ದಲಿತ ಸಂಘಟನೆಗಳು ಏಕೀಕರಣವಾಗಿ ಕಾರ್ಯನಿರ್ವಹಿಸಬೇಕು ಎಂದರು.
ನಿವೃತ್ತ ಜಿಪಿಓ ಅಧಿಕಾರಿ ಹೆಣ್ಣೂರು ಲಕ್ಷ್ಮೀನಾರಾಯಣ ಮಾತನಾಡಿ, ಮಾದಿಗರ ಚಳುವಳಿಯು 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಜಾತಿ, ಭಾಷೆ ಧರ್ಮದ ವಿಚಾರದಲ್ಲಿ ಬೇಧ ಭಾವ ಮಾಡಬಾರದೆಂದು ಸಂವಿಧಾನದ ಪೀಠಿಕೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಉಲ್ಲೇಖಿಸಿದ್ದಾರೆ. ಅದರೂ, ಸಮಾಜದಲ್ಲಿ ನಮ್ಮನ್ನು ಅಸ್ಪುರ್ಷ್ಯರಂತೆಯೇ ನೋಡುತ್ತಿದ್ದಾರೆ.ಬಹುತೇಕ ಸರ್ಕಾರಿ ನೌಕರಿಗಳಲ್ಲಿ ನಮ್ಮ ಸಮುದಾಯದ ಜನತೆಗೆ ಉದ್ಯೋಗಾವಕಾಶಗಳಿಲ್ಲ. ಈ ಹಿಂದೆ ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದಾಗಲೇ ಈ ವರದಿ ಜಾರಿ ಮಾಡುವಂತೆ ಚಳುವಳಿ ನಡೆಸಿದರು ಇದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಕೇವಲ ಆಶ್ವಾಸನೆ ನೀಡುತ್ತಿದೆ ಹೊರತು ವರದಿ ಜಾರಿ ಮಾಡಲು ಮುಂದಾಗದೆ ಇರುವುದೇ ಖಂಡನೀಯ.
ಮೀಸಲಾತಿಗೆ ಕುರಿತಂತೆ ರಾಜ್ಯಗಳೇ ತೀರ್ಮಾನ ತೆಗೆದುಕೊಳ್ಳಬಹುದು ಮತ್ತು ಒಳ ಮೀಸಲಾತಿಯನ್ನು ಮಾಡಬಹುದು ಎಂದು ಸುಪ್ರೀಂಕೋರ್ಟ್ ಆಶಯ ವ್ಯಕ್ತ ಪಡಿಸಿದೆ. ಅದೇ ರೀತಿ ತಮಿಳುನಾಡು ಸರ್ಕಾರ ಈ ಹಿಂದೆಯೇ ಒಳಮಿಸಲಾತಿಯನ್ನು ಜಾರಿಗೊಳಿಸಿರುವ ಉದಾಹರಣೆ ನಮ್ಮ ಮುಂದಿದೆ. ಕೇಂದ್ರ ಸರ್ಕಾರವೇ ನೇಮಿಸಿದ್ದ ಉಷಾ ಮೆಹ್ರಾ ಆಯೋಗ ಕೂಡ ಒಳ ಮೀಸಲಾತಿಯನ್ನು ಕೊಡಬಹುದೆಂದು ಶಿಫಾರಸು ನೀಡಿದೆ ಆದರೂ ಸಹ ಸರ್ಕಾರಗಳು ಈ ವರದಿ ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದೆ, ಒಳಮೀಸಲಾತಿಯು ಪ್ರತಿಯೊಬ್ಬ ದಲಿತನ ಆಸೆ ಮತ್ತು ಕನಸು ಅದನ್ನು ಈಡೇರಿಸುವುದೇ ನಮ್ಮ ಉದ್ದೇಶ ಎಂದರು.
ಈ ವೇಳೆ ಮಾದಾರ ಚನ್ನಯ್ಯ ಮಹಾ ಸಭಾ ತಾಲೂಕು ಅಧ್ಯಕ್ಷ ಆದಿತ್ಯ ನಾಗೇಶ್, ನಗರ ಅಧ್ಯಕ್ಷ ಆಂಜನ ಮೂರ್ತಿ, ಹಿರಿಯ ಹೋರಾಟಗಾರ ಅಂಬಣ್ಣ ಆರೋಲಿಕರ್, ಗುಟ್ಟಳ್ಳಿ ನಾಗರಾಜ್, ಹೊಸಕೋಟೆ ಸುಬ್ಬರಾಜು, ಯಾದಗಿರಿ ವಿಜಯ ಕುಮಾರ್, ನಾರಾಯಣಸ್ವಾಮಿ, ವಿಶ್ವ ಆದಿ ಜಾಂಬವ ಮಹಾಸಭಾ ಅಧ್ಯಕ್ಷ ಭೀಮರಾಜ್, ಲೆಕ್ಕ ಪರಿಶೋಧಕ ಮುನಿರಾಜ್, ವಿ.ವೆಂಕಟೇಶ್, ಲಕ್ಷ್ಮೀನಾರಾಯಣ್, ಮೈಲಾರಪ್ಪ, ಸಿದ್ದರಾಜು, ನ್ಯಾಯವಾದಿ ಮುನಿರಾಜ್, ಯುವ ಮಾದಾರ ಚನ್ನಯ್ಯ ಮಹಾಸಭಾದ ಅಧ್ಯಕ್ಷ ಶೇಖರ್, ಪ್ರಧಾನ ಕಾರ್ಯದರ್ಶಿ ಬಾಲರಾಜು, ಯುವ ಮುಖಂಡರಾದ ರಾಮಂಜಿನಪ್ಪ, ಸಿದ್ದರಾಜ್, ಮೈಲಾರಪ್ಪ, ದಾಳಪ್ಪ, ಮಾದಪ್ಪ, ಉಮೇಶ್, ಹಳೆಕೋಟೆ ರವಿ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

