ದೊಡ್ಡಬಳ್ಳಾಪುರ: ನಾಡಿನ ಹೆಮ್ಮೆಯ ಸಂಕೇತವಾದ ನಾಡಪ್ರಭುವಿನ ಪ್ರತಿಮೆ ನಿರ್ಮಾಣಕ್ಕೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ, ಮೃತ್ತಿಕೆ ಸಂಗ್ರಹ ಅಭಿಯಾನದ ರಥ ಯಾತ್ರೆಗೆ ನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಶಾಸಕ ಟಿ.ವೆಂಕಟರಮಣಯ್ಯ ಮೃತ್ತಿಕೆ (ಮಣ್ಣು) ಅರ್ಪಿಸಿ, ಕೆಂಪೇಗೌಡರಿಗೆ ಜೈಕಾರ ಹಾಕುವ ಮೂಲಕ ರಥ ಯಾತ್ರೆಗೆ ಚಾಲನೆ ನೀಡಿದರು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ರಥ ಯಾತ್ರೆಗೆ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರು ರಾಜ್ಯದ ಪ್ರಗತಿಗೆ ಮಾದರಿಯಾಗಿದ್ದಾರೆ. ನವೆಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನಾವರಣ ನೆರವೇರುತ್ತಿರುವ ಈ ರಥ ಯಾತ್ರೆ ಮೂಲಕ ಮೃತ್ತಿಕೆ ಸಂಗ್ರಹಿಸಲಾಗುತ್ತಿದೆ ಎಂದರು.
ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ, ತಾಪಂ ಇಒ ಶ್ರೀನಾಥ್ ಗೌಡ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಪೌರಾಯುಕ್ತ ಕೆ. ಜೆ.ಶಿವಶಂಕರ್, ಸಿಡಿಪಿಒ ಅನಿತಾಲಕ್ಷ್ಮೀ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಅಪ್ಪಯ್ಯಣ್ಣ, ಬಿ.ಸಿ.ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್, ಧೀರಜ್ ಮುನಿರಾಜು, ಕುಂಟನಹಳ್ಳಿ ಮಂಜುನಾಥ್, ವತ್ಸಲಾ, ತ.ನ.ಪ್ರಭುದೇವ್ ಸೇರಿದಂತೆ ನಗರಸಭೆ ಸದಸ್ಯರು ಮತ್ತಿತರರಿದ್ದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ ಆವರಣದ ಉದ್ಯಾನಕ್ಕೆ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಿಸುವ ಉದ್ದೇಶದಿಂದ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ರಥ ಸಂಚರಿಸುತ್ತಿದೆ.
ರಥ ಮಾರ್ಗ: ನವೆಂಬರ್ 03; ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ಅರಳು ಮಲ್ಲಿಗೆ, ದರ್ಗಾಜೋಗಿಹಳ್ಳಿ, ಕೊಡಿಗೇಹಳ್ಳಿ, ಕಂಟನಕುಂಟೆ, ಹಾದ್ರಿಪುರ.
ನ.04: ಮಜರಾಹೊಸಹಳ್ಳಿ, ದೊಡ್ಡತುಮಕೂರು, ಕಾಡನೂರು, ಚನ್ನಾದೇವಿ ಅಗ್ರಹಾರ, ಕನಸವಾಡಿ, ಹೊನ್ನಾವರ, ಕೆಸ್ತೂರು, ಹಣಬೆ, ತಿಪ್ಪೂರು.
ನ.05: ಹುಲಿಕುಂಟೆ, ದೊಡ್ಡಬೆಳವಂಗಲ, ಸಕ್ಕರೆಗೊಲ್ಲಹಳ್ಳಿ, ಭಕ್ತರಹಳ್ಳಿ, ಸಾಸಲು, ಆರೂಢಿ, ಹೊಸಹಳ್ಳಿ.
ನ.06: ಕೊನಘಟ್ಟ, ರಾಜಘಟ್ಟ, ಹಾಡೋನಹಳ್ಳಿ, ಎಸ್.ಎಸ್.ಘಾಟಿ, ತೂಬಗೆರೆ, ಮೆಳೇಕೋಟೆ, ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

