ಬೆಂ.ಗ್ರಾ.ಜಿಲ್ಲೆ (ನ.21): ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2023 ರ ಅಂಗವಾಗಿ ನವೆಂಬರ್ 20 ಭಾನುವಾರದಂದು ಜಿಲ್ಲೆಯಾದ್ಯಂತ ಎಲ್ಲಾ 1137 ಮತಗಟ್ಟೆಗಳಲ್ಲಿ ನಡೆದ ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಹಕ್ಕು ಮತ್ತು ಕರ್ತವ್ಯವಾಗಿದೆ. ಅರ್ಹ ಮತದಾರರು ಈ ಹಕ್ಕಿನಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ನ.20 ಭಾನುವಾರದಂದು ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ ಇರುವ ಎಲ್ಲಾ 1137 ಮತಗಟ್ಟೆಗಳ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ನಡೆಸಿದರು.
ಬರುವ ಡಿಸೆಂಬರ್ 3 ಶನಿವಾರ ಹಾಗೂ ಡಿಸೆಂಬರ್ 4 ಭಾನುವಾರದಂದು ಪುನಃ ಜಿಲ್ಲೆಯಾದ್ಯಂತ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ, ವರ್ಗಾವಣೆ, ತೆಗೆದು ಹಾಕುವುದು ಆಧಾರ್ ಜೋಡಣೆ ಮತ್ತಿತರ ಕಾರ್ಯಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಾರ್ವಜನಿಕರು ಮಾಡಿಕೊಳ್ಳಬಹುದು.
ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್ ಮೂಲಕವೂ ಈ ತಿದ್ದುಪಡಿಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳಲು ಮತದಾರರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 9 ರಂದು ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 8 ರವರೆಗೆ ಅವಕಾಶವಿದೆ.ಡಿಸೆಂಬರ್ 26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು.
2023 ರ ಜನೆವರಿ 3 ರೊಳಗೆ ಆರೋಗ್ಯ ಮಾನದಂಡಗಳನ್ನು ಪರಿಶೀಲಿಸಿ,ಅಂತಿಮ ಮತದಾರರ ಪಟ್ಟಿಗೆ ಚುನಾವಣಾ ಆಯುಕ್ತರ ಅನುಮೋದನೆ ಪಡೆದು, ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

