ದೊಡ್ಡಬಳ್ಳಾಪುರ, (ನ.02): ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತು ಅತಿ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿರುವ ಕ್ರೀಡೆಗಳಲ್ಲಿ ಫುಟ್ಬಾಲ್ಗೆ ಅಗ್ರಸ್ಥಾನವಿದೆ. ಇಂತಹ ದೈಹಿಕ ಹಾಗೂ ಮನೋಬಲ ಮಿಶ್ರಿತ ಕ್ರೀಡೆಯನ್ನು ಭಾರತದಲ್ಲಿ ಉತ್ತೇಜಿಸುವ ಅಗತ್ಯವಿದೆ ಎಂದು ವಿಟಿಯು ದೈಹಿಕ ಶಿಕ್ಷಣ ಮಾಜಿ ನಿರ್ದೇಶಕ ಡಾ.ವೈ.ಎಚ್.ರಾಜೇಶ್ ಅಭಿಪ್ರಾಯಪಟ್ಟರು.
ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ನೇತೃತ್ವದಲ್ಲಿ ಶುಕ್ರವಾರ ಆರ್ಎಲ್ಜೆಐಟಿ ಮೈದಾನದಲ್ಲಿ ಆರಂಭವಾದ 02 ದಿನಗಳ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ಬೆಂಗಳೂರು ವಲಯ ಮಟ್ಟದ ಪುರುಷರ ಫುಟ್ಬಾಲ್ ಪಂದ್ಯವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಜಗತ್ತು ಫಿಫಾ ವಿಶ್ವಕಪ್ ಫುಟ್ಬಾಲ್ನ ಕ್ರೀಡಾ ಹಬ್ಬವನ್ನು ಸಂಭ್ರಮಿಸುತ್ತಿದೆ. ಈ ಹಂತದಲ್ಲೇ ವಿಟಿಯು ವಲಯ ಮಟ್ಟದ ಫುಟ್ಬಾಲ್ ಛಾಂಪಿಯನ್ಷಿಪ್ಗೆ ಚಾಲನೆ ನೀಡಿರುವುದು ವಿಶೇಷವಾಗಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ಅಧ್ಯಯನ ಮಾಡುವ ಜತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡಾ ಚಟುವಟಿಕೆಗಳತ್ತಲೂ ಗಮನ ಹರಿಸುವುದು ಮುಖ್ಯ ಎಂದರು.
ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಟ್ರಸ್ಟ್ನ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಯ ಹಂಬಲದೊಂದಿಗೆ ಪಾಲ್ಗೊಳ್ಳುವಿಕೆಯ ಸಂಕಲ್ಪ ಅಗತ್ಯ. ವಿಟಿಯು ವಲಯ ಮಟ್ಟದ ಕ್ರೀಡಾ ಕೂಟ ಸೇರಿದಂತೆ ಹಲವು ಪಂದ್ಯಾವಳಿಗಳನ್ನು ನಡೆಸಲು ತಮ್ಮ ಸಂಸ್ಥೆ ಸದಾ ಅವಕಾಶ ನೀಡುತ್ತಾ ಬಂದಿದೆ ಎಂದರು.
ಪ್ರಾಂಶುಪಾಲ ಡಾ.ಎಂ.ಶ್ರೀನಿವಾಸರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣ ನಿರ್ದೇಶಕ ಎ.ವಿ.ಶ್ರೀನಿವಾಸರೆಡ್ಡಿ, ಆರ್ಎಲ್ಜೆ ಸಮೂಹ ಶಿಕ್ಷಣ ಸಂಸ್ಥೆ ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಆರ್ಎಲ್ಜೆಐಟಿ ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್ ಮತ್ತಿತರರು ಪಾಲ್ಗೊಂಡಿದ್ದರು.
ನಾಳೆ ಸಮಾರೋಪ: 20 ಎಂಜಿನಿಯರಿಂಗ್ ಕಾಲೇಜುಗಳ ಫುಟ್ಬಾಲ್ ತಂಡಗಳು ಪಾಲ್ಗೊಂಡಿರುವ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಾವಳಿಗಳು ಬಹುತೇಕ ಮುಕ್ತಾಯವಾಗಿದ್ದು, ಶನಿವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಬಳಿಕ ಬಹುಮಾನ ವಿತರಣೆ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

