ದೊಡ್ಡಬಳ್ಳಾಪುರ, (ಡಿ.09): ಕಾವೇರಿ ಭವನಕ್ಕೆ ತೆರಳುವ ಬಸ್ಸುಗಳಿಲ್ಲದೆ ಕಾಲೇಜಿಗೆ ತೆರಳಬೇಕಾದ ವಿದ್ಯಾರ್ಥಿಗಳು ಪರದಾಡುವಂತಾಗಿರುವ ಘಟನೆ ನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಕಂಡುಬಂದಿದೆ.
ದೊಡ್ಡಬಳ್ಳಾಪುರ – ಕಾವೇರಿ ಭವನ ಮಾರ್ಗಕ್ಕೆ ತೆರಳಲು ಬೆಳಗ್ಗೆ 7.30ರ ನಂತರ ಬಸ್ಸುಗಳು ಇಲ್ಲವಾಗಿದ್ದು, 8.45ಕ್ಕೆ ಒಂದು ಬಸ್ ಬಂದಿದೆ. ಆದರೆ ನೂರಾರು ಸಂಖ್ಯೆಯಲ್ಲಿರುವ ಪ್ರಯಾಣಿಕರು ಒಂದು ಬಸ್ಸಿನಲ್ಲಿ ಪಯಣಿಸಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತಂತೆ ಹರಿತಲೇಖನಿ ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರನ್ನು ಸಂಪರ್ಕಿಸಿದ್ದು, ಶಾಲಾ ಮಕ್ಕಳು ಪ್ರವಾಸಕ್ಕೆ ತೆರಳಲು ಬಸ್ಸುಗಳನ್ನು ಗುತ್ತಿಗೆ ಪಡೆದ ಕಾರಣ ವ್ಯತ್ಯಾಸವಾಗಿದ್ದು, ಸಮಸ್ಯೆ ಆಗದಂತೆ ಚಿಕ್ಕಬಳ್ಳಾಪುರದಿಂದ ಮತ್ತಷ್ಟು ಬಸ್ಸುಗಳನ್ನು ತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಚಿಣ್ಣರ ಕರ್ನಾಟಕ ದರ್ಶನ ಮೂಲಕ ಪ್ರವಾಸ ತಾಲೂಕಿನಾಧ್ಯಂತ ಸದ್ದು ಮಾಡುತ್ತಿದ್ದು, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರವಾಸದ ಗುಂಗಿನಲ್ಲಿದ್ದಾರೆ. ಇವರ ಪ್ರವಾಸಕ್ಕೆ ಸಾರಿಗೆ ಬಸ್ಸುಗಳು ತೆರಳಿರುವ ಕಾರಣ ಬಸ್ಸುಗಳ ಕೊರೆಯಾಗಿ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಲ್ಲದೆ ಓಂಶಕ್ತಿ ಮಾಲೆ ಧರಿಸುವ ಸಮಯ ಸಹ ಆರಂಭವಾಗಿದ್ದು, ಮತ್ತಷ್ಟು ಬಸ್ಸುಗಳ ಕೊರತೆ ಎದುರಾಗುವ ಆತಂಕ ಎದುರಾಗಿದೆ.
ದೊಡ್ಡಬಳ್ಳಾಪುರದಿಂದ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು ಬೆಂಗಳೂರಿಗೆ ತೆರಳುತ್ತಾರೆ. ಆದರೆ ಸಿಬ್ಬಂದಿಗಳ ಕೊರತೆ, ಬಸ್ಸುಗಳ ಕೊರತೆಯಿಂದಾಗಿ ಪದೇ ಪದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

