ದೊಡ್ಡಬಳ್ಳಾಪುರ, (ಡಿ.18): ಕನ್ನಡ ಭಾಷೆ ಶ್ರೀಮಂತವಾಗಿದ್ದು, ನೊಬೆಲ್ ಪ್ರಶಸ್ತಿ ಪಡೆಯಲು ಅರ್ಹರಾಗಿರುವ ನಾಲ್ಕೈದು ಕೃತಿಗಳು ಕನ್ನಡದಲ್ಲಿದೆ. ಆದರೆ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನಗಳ ಬಗ್ಗೆ ಸಕಾಲದಲ್ಲಿ ನಾವು ಎಚ್ಚೆತ್ತುಕೊಳ್ಳದ ಕಾರಣ ಕನ್ನಡ ಭಾಷೆ ಹಲವು ಗೌರವಾದರಗಳಿಂದ ವಂಚತವಾಗಿರುವುದು ನೋವಿನ ಸಂಗತಿ ಎಂದು ಕಾನೂನು ತಜ್ಞ ಸಿ.ಎಚ್.ಹನುಮಂತರಾಯ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪೌರಾಣಿಕತೆ ಮೌಢ್ಯತೆ ಹಿಂದಿನ ಸಾಹಿತ್ಯದಲ್ಲಿ ಪ್ರಮುಖ ಹೆಚ್ಚಾಗಿತ್ತು. ಆಂಗ್ಲ ಸಾಹಿತ್ಯ ಎಂದರೆ ಶೇಕ್ಸ್ ಪಿಯರ್ನನ್ನು ಅಧ್ಯಯನ ಮಾಡುವುದು ಎಂದು ಬಿಂಬಿತವಾಗಿತ್ತು. ಇದೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಕನ್ನಡದ ಸಾಹಿತಿಗಳು ಕೃತಿಗಳನ್ನು ರಚಿಸಿದ್ದಾರೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿ ಆಂಗ್ಲ ಭಾಷೆಗೆ ಭಾಷಾಂತರ ಮಾಡುವಂತೆ ಹೇಳಿದ್ದ ವ್ಯಕ್ತಿಯು ಸಕಾಲದಲ್ಲಿ ಮಾಡಿಕೊಡದೇ ವಿಳಂಬ ಮಾಡಿದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಸಹ ನೊಬೆಲ್ ಪಡೆಯಲು ಅರ್ಹವಾಗಿದೆ. 800 ಕ್ಕೂ ಹೆಚ್ಚು ಪದ್ಯಗಳ ಸಾರವನ್ನು ಒಂದೇ ಪುಟದಲ್ಲಿ ಕುವೆಂಪು ಅವರು ಮುನ್ನುಡಿ ಬರೆದಿದ್ದರು ಎಂದರು.
2ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸುಲಭವಾಗಿ ದಕ್ಕಲಿಲ್ಲ. ತಮಿಳುನಾಡಿನ ಗಾಂಧಿ ಎನ್ನುವ ವಕೀಲರು, ಕನ್ನಡಕ್ಕೆ ಯಾವುದೇ ಕಾರಣಕ್ಕೂ ಶಾಸ್ತ್ರೀಯ ಸ್ಥಾನಮಾನ ಸಿಗಬಾರದೂ ತಮಿಳಿಗೆ ಮಾತ್ರ ಸಿಗಬೇಕೆಂಬ ನಿಲುವು ತಾಳಿದ್ದರು. ಅದು ಸುಪ್ರೀಂ ಕೋರ್ಟ್ನಲ್ಲಿ ಸಹ ವಿಚಾರಣೆ ನಡೆದು ರಾಜ್ಯದ 5 ಮಂದಿ ವಕೀಲರ ತಂಡ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ವಾದ ಮಂಡಿಸಿದ್ದರು ಈ 5 ಮಂದಿ ವಕೀಲರ ತಂಡದಲ್ಲಿ ನಾನೂ ಇದ್ದೆ. ಕೊನೆಗೆ ವಾದ ವಿವಾದಗಳು ನಡೆದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಆದರೆ ಈ ಸಂಭ್ರಮಾಚರಣೆ ಸಂದರ್ಭದಲ್ಲಿ ವಾದ ಮಂಡಿಸಿದ ವಕೀಲರನ್ನು ಸ್ಮರಿಸಲಿಲ್ಲ ಎಂದರು.
ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಕುವೆಂಪು ನಿರಂಕುಶಮತಿಗಳಾಗಿ ಎಂದು ಕರೆಕೊಟ್ಟಿದ್ದು ವಿವಾದವಾಗಿ ಅವರಿಗೆ ನೊಟೀಸ್ ಸಹ ನೀಡಿಲಾಗಿತ್ತು. ಆದರೆ ಅದಕ್ಕೆ ಅವರು ಕವನದ ಮೂಲಕ ದಿಟ್ಟ ಉತ್ತರ ನೀಡಿದ್ದರು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಂಪರೆಗಳನ್ನು ನಮ್ಮನ್ನು ಹತ್ತಿರ ಮಾಡಿಕೊಳ್ಳುವಲ್ಲಿ ಹಾಗೂ ಕನ್ನಡದ ಆಸ್ಮಿತೆಯನ್ನು ಬಿಂಬಿಸುವಲ್ಲಿ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸಲಿದ್ದು, ಹೋಬಳಿ ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳು ನಡೆಯಬೇಕಿದೆ ಎಂದರು.
ಸಮ್ಮೇಳನಾಧ್ಯಕ್ಷ ಶ್ರೀರಾಮನಹಳ್ಳಿ ಚಿನ್ನುಪ್ರಕಾಶ್ ಮಾತನಾಡಿ, ಏಕೀಕರಣಗೊಂಡಿರುವ ಕರ್ನಾಟಕ ರಾಜ್ಯ ತನ್ನದೇ ಸಾಹಿತ್ಯ, ಕಲೆ ಸಂಸ್ಕೃತಿಗಳಿಂದ ಜಗದ್ವಿಖ್ಯಾತವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ, ಕನ್ನಡ ನಾಡು ನುಡಿಗಳ ಉಳಿವಿಗಾಗಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕಿದೆ. ಕನ್ನಡಿಗರು ಔದಾರ್ಯ ವಿಶಾಲ ಹದೃಯಿಗಳಾಗಿದ್ದು, ಕನ್ನಡ ನಾಡು ಸಿರಿವಂತವಾಗಿದೆ. ಆದರೆ ಗಡಿ ಸಮಸ್ಯೆ, ಪರಭಾಷೆಗಳ ಏರಿಕೆಗಳ ದಬ್ಬಾಳಿಕೆಯನ್ನು ಇಲ್ಲವಾಗಿಸಬೇಕಿದೆ. ದೊಡ್ಡಬಳ್ಳಾಪುರ ನಗರ ರೇಷ್ಮೆ ಉದ್ಯಮಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ನೇಕಾರಿಕೆ ಪ್ರಸಿದ್ದಿ ಪಡೆದಿದೆ. ಆದರೆ ಸಾಸಲು ಹೋಬಳಿ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದ ಹಾಗೂ ಜನತೆ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೋಬಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದಕ್ಕೆ ಜನಪ್ರತಿನಿಧಿಗಳು ಗಂಭೀರ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ, ನುಡಿಗಾಗಿ ಉತ್ತಮ ವೇದಿಕೆಯಾಗುತ್ತಿರುವುದು ಅಭಿನಂದಿನೀಯವಾಗಿದ್ದು, ಎಲ್ಲರಲ್ಲೂ ಭಾಷಾಭಿಮಾನ ಬೆಳೆಯಬೇಕು ಎಂದರು.
ಸಮಾರಂಭದಲ್ಲಿ ಡಾ.ಬೆ.ಲ.ಸುರೇಶ್ ವಿರಚಿತ ಹರಿ ಭಾಸ್ಕರ ಪಾರ್ಥಸಾರಥಿ ಎಂಬ ವಿಠಲದಾಸರ ಸಮಗ್ರ ಕೃತಿ ಶ್ರೇಣಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿರುವ ಸಾಧಕ ಕೃಷಿಕರು ಹಾಗೂ ಸಮ್ಮೇಳಾನಾಧ್ಯಕ್ಷರ ನುಡಿ ಕೈಪಿಡಿ ಪುಸ್ತಕಗಳನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಅವರು ಬಿಡುಗಡೆ ಮಾಡಿದರು.
ವಿವಿಧ ಸಾಧಕ ಸಂಸ್ಥೆಗಳಿಗೆ ಗೌರವ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ಸಮಾರಂಭದಲ್ಲಿ ತಹಶೀಲ್ದಾರ್ ಮೋಹನ ಕುಮಾರಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥಗೌಡ, ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀಪತಿ, ಬಿಇಓ ಆರ್.ರಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ಸಾಸಲು ಗ್ರಾ.ಪಂ.ಅಧ್ಯಕ್ಷ ಮಾರೇಗೌಡ, ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ, ಬಿ.ಮುನೇಗೌಡ, ವಿಶ್ವನಾಥ ರೆಡ್ಡಿ, ರಾಜಘಟ್ಟ ರವಿ, ಕೆಂಪಣ್ಣ, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕಾರ್ಯದರ್ಶಿ ಟಿ.ಕೆ.ಪ್ರಕಾಶ್, ಜಿಲ್ಕಾ ಕಸಾಪ ಗೌ.ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಎಂ.ಮುನಿರಾಜು, ದೇವನಹಳ್ಳಿ ತಾ.ಅಧ್ಯಕ್ಷ ನಂಜೇಗೌಡ, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಕಸಾಪ ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಗೌರವಕಾರ್ಯದರ್ಶಿ ಕೇಶವಮೂರ್ತಿ, ಕೋಶಾಧ್ಯಕ್ಷ ಹರೀಶ್ ಕುಮಾರ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್ ಮೊದಲಾದವರು ಭಾಗವಹಿಸಿದ್ದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಸಾಸಲು ಗ್ರಾಮದ ಶ್ರೀ ಆಂಜನೇಯ ಸ್ಚಾಮಿ ದೇವಾಲಯದಲ್ಲಿ ಪೂಜೆ ನಡೆಸಿ ಸಮ್ಮೇಳನಾಧ್ಯಕ್ಷ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರನ್ನು ವಿವಿಧ ಕಲಾತಂಡ, ವಾದ್ಯಗೋಷ್ಟಿ, ಸೇವಾದಳ ತಂಡಗಳ ಪಥಸಂಚಲನದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಕನ್ನಡಧ್ವಜವನ್ನು ತಹಶೀಲ್ದಾರ್ ಮೋಹನ ಕುಮಾರಿ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನೆರವೇರಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

