ದೊಡ್ಡಬಳ್ಳಾಪುರ : ವಿದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವಂತಹ ರಾಜ್ಯದ ಪ್ರಯಾಣಿಕರನ್ನು ಕ್ವಾರಂಟೈನ್ ಗೆ ಒಳಪಡಿಸುವಾಗ,ಸೂಕ್ತ ಆರೋಗ್ಯ ಮತ್ತು ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಲ್ಪಿಸುವ ಸಂಬಂಧ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಕಾರ್ಯಕ್ಕೆ ನಿಯೋಜನೆಕೊಂಡಿರುವ ಎಲ್ಲಾ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮೇ.11 ರಿಂದ,ವಿದೇಶದಿಂದ ಆಗಮಿಸುವ ರಾಜ್ಯದ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಮೂರು ದರ್ಜೆಗಳಲ್ಲಿ ಹೋಟೆಲ್ ಗಳನ್ನು ಗುರುತಿಸಲಾಗಿದ್ದು, ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರ ನಿಗದಿಪಡಿಸಿರುವ ದರವನ್ನು ಭರಿಸಿ, ಇಚ್ಚಿಸುವ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ವ್ಯವಸ್ಥೆಗೆ ಒಳಗಾಗಬಹುದು. ವಿಮಾನ ಪ್ರಯಾಣಕ್ಕೆ ಮುನ್ನ ಹಾಗೂ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಯಬೇಕು ಎಂದು ತಿಳಿಸಿದರು.
ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕು ಶಂಕೆ ಕಂಡುಬಂದಲ್ಲಿ, ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ವಿದೇಶದಿಂದ ಆಗಮಿಸುವ ಯಾವ ಒಬ್ಬ ಪ್ರಯಾಣಿಕ ಕ್ವಾರಂಟೈನ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳದಂತೆ ಅಧಿಕಾರಿಗಳು ಬಹಳ ಎಚ್ಚರ ವಹಿಸಬೇಕು. ಹೋಟೆಲ್‌ಗಳಲ್ಲೂ ಸಹ ವೈದ್ಯಕೀಯ ಸಿಬ್ಬಂದಿಗಳನ್ನು ಪ್ರಯಾಣಿಕರ ಆರೋಗ್ಯ ಸೇವೆಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಯಾಣಿಕರ ಕ್ವಾರಂಟೈನ್ ವ್ಯವಸ್ಥೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರಿಗೆ ಮೊದಲ ಬೆಂಗಳೂರು ನಗರದಲ್ಲಿ ಗುರುತಿಸಿರುವ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ಪ್ರಯಾಣಿಕರ ಸಂಖ್ಯೆ ಹೆಚ್ಚಿದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದಲ್ಲಿ ಗುರುತಿಸಿರುವ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಹಾಯವಾಗುವಂತೆ ಹೆಲ್ಪ್‌ಡೆಸ್ಕ್ ತೆರೆಯಲಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಇಳಿದ ತಕ್ಷಣವೇ ಅವರಿಗೆ ಭಾರತೀಯ ಸಿಮ್‌ಕಾರ್ಡ್ ಗಳನ್ನು ನೀಡಲಾಗುವುದು. ಎಲ್ಲಾ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಿ ನಿಗದಿತ ಹೋಟೆಲ್‌ಗಳಿಗೆ ಅಧಿಕಾರಿ ನೇತೃತ್ವದಲ್ಲಿ ಕೇವಲ 20 ಪ್ರಯಾಣಿಕರನ್ನು ಬಸ್‌ಗಳ ಮೂಲಕ ಗುರುತಿಸಿರುವ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಲಾಗುವುದು. ಪ್ರತಿ ಹೋಟೆಲ್‌ಗೆ ಒಬ್ಬ ಅಧಿಕಾರಿಯನ್ನು ಉಸ್ತುವಾರಿ ನೋಡಿಕೊಳ್ಳಲು ನೇಮಿಸಲಾಗಿದೆ ಎಂದರು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ಟಿ.ಆರ್.ಶೋಭಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.