ದೊಡ್ಡಬಳ್ಳಾಪುರ : ಸಂಜೀವಿನಿ ಎನ್.ಆರ್.ಎಲ್.ಎಂ. ಯೋಜನೆಯಡಿ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರ ನಾಟಿ ಕೋಳಿ ಸಾಕಾಣಿಕಾ ಉತ್ಪಾದಕರ ಕಂಪನಿ ಹೆಸರಿನಡಿ ಸ್ಥಾಪನೆ ಮಾಡಿ, ಅವಶ್ಯವಿರುವ ತರಬೇತಿ, ಮಾರ್ಗದರ್ಶನವನ್ನು ಪರಿಣಿತಿ ಹೊಂದಿದ ಸಂಸ್ಥೆ ಮೂಲಕ ಕೈಗೊಳ್ಳಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳ ಇಲಾಖೆ ಆಯುಕ್ತ ನಟೇಶ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ, ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ, ಹೊಸಕೋಟೆ ತಾಲ್ಲೂಕಿನಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡುವ ರೈತ ಉತ್ಪಾದನಾ ಕಂಪನಿಯನ್ನು ಸಂಜೀವಿನಿ ಎನ್.ಆರ್.ಎಲ್.ಎಂ.(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಯೋಜನೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳ ಇಲಾಖೆ ಹಾಗೂ ಕರ್ನಾಟಕ ಸಹಕಾರ ಕುಕ್ಕೂಟ ಮಹಾ ಮಂಡಳಿ ರವರ ಸಹಯೋಗದೊಂದಿಗೆ ಸ್ಥಾಪಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಹೊಸಕೋಟೆ ತಾಲ್ಲೂಕಿನಲ್ಲಿ ಕನಿಷ್ಠ ೫೦೦ ರಿಂದ ೧೦೦೦ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರ ನಾಟಿ ಕೋಳಿ ಸಾಕಾಣಿಕಾ ಉತ್ಪಾದಕರ ಕಂಪನಿಯನ್ನು ಸ್ಥಾಪನೆ ಮಾಡಲಾಗುವುದು. ಕಂಪನಿಯ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಅವಶ್ಯವಿರುವ ತರಬೇತಿ, ಮಾರ್ಗದರ್ಶನವನ್ನು ಪರಿಣಿತಿ ಹೊಂದಿದ ಸಂಸ್ಥೆ ಮೂಲಕ ಕೈಗೊಂಡು, ಉತ್ತಮ ಗುಣಮಟ್ಟದ ನಾಟಿ ಕೋಳಿ ಮರಿಗಳನ್ನು ನೀಡಲಾಗುವುದು. ಪೋಷಣೆ ಮಾಡಿ ಬೆಳೆದ ನಾಟಿ ಕೋಳಿಗೆ ಮಾರುಕಟ್ಟೆ ಸೌಲಭ್ಯವನ್ನು ಕಂಪನಿಯ ಮುಖಾಂತರ ಬೆಂಗಳೂರಿಗೆ ಬೇಡಿಕೆಯನುಸಾರ ಕಲ್ಪಿಸಲು ಕ್ರಮ ವಹಿಸಲಾಗುವುದೆಂದು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ ಮಾತನಾಡಿ,ಸಂಜೀವಿನಿ ಎನ್.ಆರ್.ಎಲ್.ಎಂ. ಯೋಜನೆಯಡಿ ರಚನೆಯಾಗಿರುವ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳಡಿ ಬರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಉಪ ಕಸುಬಾಗಿ ನಾಟಿ ಕೋಳಿ ಸಾಕಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಚಟುವಟಿಕೆಗಳನ್ನು ಕೈಗೊಂಡು ಕಂಪನಿಯ ಮುಖಾಂತರ ಮಾರುಕಟ್ಟೆಯನ್ನು ಕಲ್ಪಿಸಿದರೆ ಗ್ರಾಮೀಣ ಮಹಿಳೆಯರ ಆದಾಯ ಹೆಚ್ಚಳವಾಗಲು ಸಹಕಾರಿಯಾಗುವುದೆಂದು ತಿಳಿಸಿದರು.
ಕರ್ನಾಟಕ ಸಹಕಾರ ಕುಕ್ಕೂಟ ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಹೆಚ್.ಶಿವರುದ್ರಪ್ಪ ರೈತ ಉತ್ಪಾದಕ ಕಂಪನಿಯ ರಚನೆಯ ಬಗ್ಗೆ ಹಾಗೂ ಇಲಾಖೆಯಿಂದ ಕಂಪನಿಗೆ ದೊರೆಯುವ ಬೆಂಬಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕ ಡಾ.ಬಾಲಚಂದ್ರ, ಹೊಸಕೋಟೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್‌ಗೌಡ, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಜಿಲ್ಲಾ ವ್ಯವಸ್ಥಾಪಕ ಅಶೋಕ.ವೈ.ಎಸ್. ಸೇರಿದಂತೆ ಹೊಸಕೋಟೆ ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಜೀವಿನಿ ಯೋಜನೆಯ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.