ದೊಡ್ಡಬಳ್ಳಾಪುರ : ಕೊವಿಡ್-19 ಲಾಕ್‌ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಬೆಳಗಿನಿಂದ ಸಂಜೆ 5 ಗಂಟೆಯವರೆಗೆ ವಿವಿಧ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿಯಮಾನುಸಾರ ಅನುಮತಿ ನೀಡಿದ್ದು, ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಡಿವೈಎಸ್‌ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ನಡೆದ ವಿವಿಧ ಅಂಗಡಿ, ವಾಣಿಜ್ಯ ಮಳಿಗೆಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಅಂಗಡಿಗಳಲ್ಲಿ ಗುಟ್ಕಾ ಮಾರಾಟಕ್ಕೆ ಅನುಮತಿ ಇಲ್ಲ,ಗ್ರಾಹಕರು ಬಂದಾಗ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಸಲಾಗುವುದು. ವಿನಾಯಿತಿ ನೀಡಿರುವ ಕೈಗಾರಿಕೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳುನ್ನು ಹೊರತು ಪಡಿಸಿ ಬೇರೆ ವಹಿವಾಟುಗಳಿಗೆ ಅನುಮತಿ ಇಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅನುಮತಿ ಇದೆ.
ಸೋಂಕಿತರು ಹೆಚ್ಚಾದರೆ ಅದಕ್ಕೆ ಪೂರಕವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇದಕ್ಕಿರುವ ಮಾರ್ಗ ಎಂದರೆ ಸೋಂಕು ಹರಡುವುದನ್ನು ತಡೆಗಟ್ಟುವುದು. ವಾಣಿಜ್ಯ ಪ್ರದೇಶಗಳಲ್ಲಿ ಜನರು ಸಂಪರ್ಕಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು. ಜಿಲ್ಲಾಕಾರಿಗಳ ಸೂಚನೆಯಂತೆ ಆಟೋ ಮೊದಲಾದ ಸಾರ್ವಜನಿಕ ವಾಹನಗಳಿಗೆ ಅವಕಾಶವಿಲ್ಲ. ದ್ವಿಚಕ್ರವಾಹಗಳಲ್ಲಿ ಒಬ್ಬರು, ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದೆ. ಜನಸಾಮಾನ್ಯರು ತಮ್ಮ ಮಳಿಗೆಗಳಿಗೆ ಬಂದಾಗ ಅವರಿಗೆ ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚಿಸುವುದು ಅಂಗಡಿ ಮಾಲೀಕರ ಕರ್ತವ್ಯವಾಗಿದ್ದು,ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಎಸ್.ಗೌಡ,ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್,ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ.ಗಜೇಂದ್ರ ಹಾಜರಿದ್ದರು.