ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ವಲಯ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ 100 ಮಂದಿ ಬಿಹಾರ ಮೂಲದ ಕಾರ್ಮಿಕರನ್ನು ನಗರ ಪೊಲೀಸ್ ಠಾಣೆಯ ಆವರಣದ ಬಳಿಯಿಂದ ಕಳುಹಿಸಿಕೊಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಎಸ್.ಗೌಡ, ಸ್ಥಳೀಯ ಆಡಳಿತದ ಬಳಿ ನೋಂದಾಯಿಸಿಕೊಂಡಿದ್ದ ದೊಡ್ಡಬಳ್ಳಾಪುರ ವಲಯ ಪೊಲೀಸ್ ಠಾಣೆಗಳ ವ್ಯಾಪ್ತಿಯ 100 ಮಂದಿ ಕಾರ್ಮಿಕರ ಆರೋಗ್ಯ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಬಿಎಂಟಿಸಿ ಬಸ್‌ಗಳಲ್ಲಿ ಮಾಲೂರಿಗೆ ಕಳುಹಿಸಿಕೊಡಲಾಗುತ್ತಿದೆ. ಮಾಲೂರಿಗೆ ಆಗಮಿಸುವ ರೈಲಿನ ಮೂಲಕ ಕಾರ್ಮಿಕರು ಬಿಹಾರಕ್ಕೆ ತೆರಳಲಿದ್ದಾರೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆಯ ಚಿಕ್ಕಬಳ್ಳಾಪುರ ವಿಭಾಗದ ಸಂಚಾರ ನಿರೀಕ್ಷಕರಾದ ಶುಭಾ ಮಾಹಿತಿ ನೀಡಿ, ಸರ್ಕಾರದ ಬಳಿ ನೋಂದಾಯಿಸಿದ ಕಾರ್ಮಿಕರಿಗಷ್ಟೇ ಪ್ರಯಾಣ ಮಾಡಲು ಅವಕಾಶವಿದ್ದು, ಬೇರೆ ಯಾರೊಬ್ಬರಿಗೂ ಪ್ರವೇಶವಿಲ್ಲ. ವೈಯಕ್ತಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರಿಗೆ 5 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಾಲೂರಿಗೆ ಬಸ್ ವ್ಯವಸ್ಥೆ ಹಾಗೂ ಅಲ್ಲಿಂದ ರೈಲಿನಲ್ಲಿ ತೆರಳಲು ತಲಾ ಒಬ್ಬರಿಗೆ 990 ರೂ ನಂತೆ ಟಿಕೆಟ್‌ಗಳನ್ನು ಇಲ್ಲಿಯೇ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್,ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಪುಟ್ಟವೀರಪ್ಪ ಸೇರಿದಂತೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.