ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೆಲ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಆರಂಭವಾಗಿದೆ. ಆದರೆ ಸಾರಿಗೆ ಸೌಲಭ್ಯ ಮಾತ್ರ ಕಲ್ಪಿಸಿಲ್ಲ.ಹೀಗಾಗಿ ಮೂರು ಅಥವಾ ನಾಲ್ಕು ಜನ ಕುಳಿತುಕೊಳ್ಳುವ ಆಟೋಗಳಲ್ಲಿ 8 ರಿಂದ 12 ಜನರವರೆಗೂ ಒಬ್ಬರ ಮೇಲೊಬ್ಬರು ಕುಳಿತು ಪ್ರಯಾಣಿಸುವುದು ಅನಿವಾರ್ಯವಾಗಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ನಗರ ಪ್ರದೇಶದ ಅಂಗಡಿಗಳಲ್ಲಿ ಅಂತರ ಕಾಯ್ದುಕೊಂಡು ನಿಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತಿದೆ. ಅಂತರ ಕಾಯ್ದುಕೊಂಡು ಪ್ರಯಾಣಿಸುವುದು ಕಷ್ಟವಾಗಲಿದೆ ಎನ್ನುವ ಕಾರಣದಿಂದಾಗಿಯೇ ಬಿಎಂಟಿಸಿ, ಕೆಎಸ್ಆರ್ಟಿಸಿ, ರೈಲುಗಳ ಸೇವೆಯನ್ನೇ ಇನ್ನು ಆರಂಭಿಸಿಲ್ಲ. ಆದರೆ ಆಟೋಗಳಲ್ಲಿ ಕುರಿಗಳನ್ನು ತುಂಬಿದಂತೆ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಗಾರ್ಮೆಂಟ್ಸ್ಗಳಿಗೆ ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರ ಪ್ರಯಾಣಕ್ಕೆ ತುರ್ತಾಗಿ ಬಸ್ಗಳ ಸೌಕರ್ಯವನ್ನು ಕೈಗಾರಿಕೆಗಳವರು ಕಲ್ಪಿಸಬೇಕು. ಬಸ್ ಸೌಲಭ್ಯಗಳನ್ನು ಕಲ್ಪಿಸದಲೇ ಕೆಲಸ ಆರಂಭಿಸಿರುವ ಕ್ರಮವೇ ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪಗಳು ಕೇಳಿಬಂದಿವೆ.