ಹೊಸಕೋಟೆ : ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತಿಯ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ನಾಗರಾಜ ಅವರು ಭೇಟಿ ನೀಡಿ, ಕೋವಿಡ್-19 ಮತ್ತು ಸ್ವಚ್ಛತೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯ ಕಾರ್ಯ ವೈಖರಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಔಷಧ ದಾಸ್ತಾನು ಘಟಕಕ್ಕೆ ಭೇಟಿ ನೀಡಿದ ಸಿಇಓ ಎಂ.ಎನ್.ನಾಗರಾಜ ಅವರು ಔಷಧಿಗಳನ್ನು ಪರಿಶೀಲಿಸಿ, ಅವಧಿ ಮುಗಿದ ಔಷಧಿಗಳನ್ನು ಘಟಕದಿಂದ ಬೇರೆಡೆ ಸ್ಥಳಾಂತರಿಸಲು ವೈದ್ಯರಿಗೆ ತಿಳಿಸಿದರು.
ನಂತರ ಸಮೇತನಹಳ್ಳಿ ಘನ ಮತ್ತು ದ್ರವ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಸಿಇಓ ಅವರು ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಕೇವಲ 3 ಗ್ರಾಮಗಳಿಂದ ಕಸ ಸಂಗ್ರಹಣೆಯಾಗುತ್ತಿದ್ದು, ಉಳಿದ 2 ಗ್ರಾಮಗಳಿಂದ ಶೀಘ್ರ ಕಸ ಸಂಗ್ರಹಣೆ ಮಾಡಲು ಕ್ರಮವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.
ತದನಂತರ ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ರಾಜಕಾಲುವೆಯ ಕಾಂಪೌಂಡ್ ನಿರ್ಮಾಣ ಮತ್ತು ಗೋಕಟ್ಟೆ ಕಾಮಗಾರಿಗಳ ಸ್ಥಳಕ್ಕೆ ಸಿಇಓ ಅವರು ಭೇಟಿ ನೀಡಿ ಪರಿಶೀಲಿಸಿ, ಗೋಕಟ್ಟೆಗೆ ಮೆಟ್ಟಿಲುಗಳನ್ನು ನಿರ್ಮಿಸಲು ಸೂಚಿಸಿದರು. ಇದೇ ಸಮಯದಲ್ಲಿ ಸ್ಮಶಾನದ ಅಭಿವೃದ್ಧಿ ಕಾಮಗಾರಿಯನ್ನು ಸಹ ವೀಕ್ಷಣೆ ಮಾಡಿದರು.