ದೊಡ್ಡಬಳ್ಳಾಪುರ : ಕರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ನೇಕಾರರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಈ ಕೂಡಲೇ ನೇಕಾರರ ಸಂಕಷ್ಟಗಳನ್ನು ಬಗೆಹರಿಸಲು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ನೇಕಾರರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ತೆರಳುತ್ತಿದ್ದ ನೂರಾರು ನೇಕಾರರನ್ನು ತಾಲೂಕಿನ ರಘನಾಥಪುರದ ಬಳಿ ಪೊಲೀಸರು ತಡೆದ ಪ್ರಸಂಗ ನಡೆಯಿತು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೀರಸಂದ್ರದ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲು ವಿವಿಧ ವಾಹನಗಳಲ್ಲಿ ತೆರಳುತ್ತಿದ್ದ ನೂರಾರು ನೇಕಾರರು ಹಾಗೂ ಮುಖಂಡರನ್ನು ರಘನಾಥಪುರದ ಬಳಿ ತಡೆದು ಕೊರೊನಾ ಲಾಕ್ಡೌನ್ ವಿಸ್ತರಣೆ ಇರುವುದರಿಂದ ಇಷ್ಟೊಂದು ಮಂದಿಯನ್ನು ತೆರಳಲು ಬಿಡುವುದಿಲ್ಲ ಎಂದು ಪೊಲೀಸರು ತಡೆದರು.
ಇದಕ್ಕೆ ಪ್ರತಿಕ್ರಿಯಿಸಿದ ನೇಕಾರ ಮುಖಂಡರು, ನಾವು ಮನವಿ ಸಲ್ಲಿಸುವ ಕುರಿತಂತೆ ಸಭೆ ಸೇರಿದ್ದ ವೇಳೆ ಮೇ.17ಕ್ಕೆ ಲಾಕ್ಡೌನ್ ಅವಧಿ ಮುಗಿಯುವುದಾಗಿ ಘೋಷಣೆಯಾಗಿತ್ತು.ಆದ್ದರಿಂದ ಇಂದು ಮನವಿ ಸಲ್ಲಿಸಲು ತೆರಳುತ್ತಿದ್ದೇವೆ. ನಿಯಮ ಮೀರಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ನೂರಾರು ನೇಕಾರರು ರಸ್ತೆಯಲ್ಲಿ ಸೇರಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.ನಂತರ ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಲಿ ಎಂದು ನೇಕಾರ ಮುಖಂಡರು ಒತ್ತಾಯಿಸಿದಾಗ ಜಿಲ್ಲಾಧಿಕಾರಿಗಳ ಬದಲಿಗೆ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಮನವಿ ಸಲ್ಲಿಸಿದ ನೇಕಾರ ಮುಖಂಡ ಪಿ.ಎ.ವೆಂಕಟೇಶ್ ಮಾತನಾಡಿ,ಕರೊನಾ ಪರಿಣಾಮ ನೇಕಾರಿಕೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ರೇಷ್ಮೆ ಬೆಲೆ ಹೆಚ್ಚಳ, ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ಇಲ್ಲದಿರುವುದು ಮೊದಲಾದ ಸಮಸ್ಯೆಗಳಲ್ಲಿಯೇ ನೇಕಾರರು ಬದುಕುತ್ತಿದ್ದು,ಲಾಕ್ಡೌನ್ ನೇಕಾರರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ.ನೇಕಾರರಿಗೆ ನೆರವು ನೀಡಬೇಕೆನ್ನುವ ಮನವಿಯನ್ನು ಮುಖ್ಯಮಂತ್ರಿಗಳಾದಿಯಾಗಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೆ ನೇಕಾರರಿಗೆ ತುರ್ತಾಗಿ ಯಾವುದೇ ನೆರವು ದೊರೆತಿಲ್ಲ. ಈ ದಿಸೆಯಲ್ಲಿ ನೇಕಾರರ ಕುಟುಂಬಕ್ಕೆ ಮಾಸಿಕ 7.5 ಸಾವಿರ ಧನ ಸಹಾಯ ನೀಡಬೇಕು. ದಕ್ಷಿಣ ಭಾರತದ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನೇಕಾರರಿಗೆ ತಿಂಗಳಿಗೆ 2 ಸಾವಿರ ರೂ ನೀಡುತ್ತಿದ್ದು, ಅದೇ ರೀತಿ ಕರ್ನಾಟಕದ ಪವರ್ಲೂಂ ನೇಕಾರರಿಗೂ ಸಿಗುವಂತಾಗಬೇಕು. ಉದ್ಯಮ ಚೇತರಿಸಿಕೊಳ್ಳುವ ತನಕ ವಿದ್ಯುತ್ ಬಿಲ್ (ಗೃಹ ಬಳಕೆಯೂ ಸೇರಿ) ಸಂಪೂರ್ಣ ಮನ್ನಾ ಮಾಡಬೇಕು.ನೇಕಾರರ ಬಟ್ಟೆಗಳನ್ನು ಖರೀದಿಸಲು ಫ್ಯಾಬ್ರಿಕ್ ಬ್ಯಾಂಕ್ ತೆರೆಯಬೇಕು.. ನೇಕಾರರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಬೇಕು. ನೇಕಾರರಿಗೆ ಉಚಿತ ಆರೋಗ್ಯ ಸೌಲಭ್ಯ, ಮಗ್ಗಗಳಿಗೆ ಸಹಾಯಧನ, ನೇಕಾರರ ಮಕ್ಕಳಿಗೆ ಶಿಕ್ಷಣ ಶುಲ್ಕ ರಿಯಾಯಿತಿ ಸೌಲಭ್ಯ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ನೇಕಾರರ ಸಂಕಷ್ಟಗಳನ್ನು ಮನವರಿಕೆಯಾಗಿದ್ದು,ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿ ನಂತರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಬಂಧಪಟ್ಟ ಸಚಿವರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಬಹುದಾಗಿದೆ. ವಲಸೆ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿದಂತೆ ನೇಕಾರರಿಗೆ ಕಿಟ್ ವಿತರಣೆ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಟಿ.ಎಸ್.ಶಿವರಾಜ್,ನೇಕಾರರ ಹಿತರಕ್ಷಣಾ ಸಮಿತಿಯ ಕೆ.ಮಲ್ಲೇಶ್,ಎಸ್.ಅಶೋಕ್,ಎಂ.ಮುನಿರಾಜು,ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ,ಜಿಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ,ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಟಿ.ಎನ್.ಪ್ರಭುದೇವ್, ಆರ್.ಕೆಂಪರಾಜ್ ಮತ್ತಿತರರು ಭಾಗವಹಿಸಿದ್ದರು.