ದೊಡ್ಡಬಳ್ಳಾಪುರ : ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ,ನ್ಯಾಯ ನೀಡಬೇಕಾದ ಪೊಲೀಸ್ ಇಲಾಖೆ ಪ್ರಭಾವಿ ವಕೀಲರೊಬ್ಬರ ಮೇಲೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ.ಈ ನಿಟ್ಟಿನಲ್ಲಿ ಪೊಲೀಸರಿಗೆ ಇದೇ ಮೇ.29ರವರೆಗೆ ಗಡವು ನೀಡುತ್ತಿದ್ದು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳದೆ ಹೋದರೆ ಮೇ.30ರಂದು ಡಿವೈಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರಾಜ ಸಣ್ಣಕ್ಕಿ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಲ್ಲಿ ಕನ್ನಡಪರ, ದಲಿತಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ವಕೀಲರಾದ ಜಿ.ವೆಂಕಟೇಶ್ ಅವರು ವಿವಿಧ ಪ್ರಕರಣಗಳಲ್ಲಿ ಹಲವಾರು ಜನರಿಗೆ ಕಿರುಕುಳ ನೀಡುತ್ತಿರುವ ಆರೋಪಗಳಿವೆ. ಈ ಬಗ್ಗೆ ಸಾರ್ವಜನಿಕರಿಂದ ಆರು ದೂರುಗಳನ್ನು ನೀಡಿ, ಹದಿನೈದು ದಿನಗಳು ಕಳೆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ.ಈ ನಿಟ್ಟಿನಲ್ಲಿ ಜನಪರ ಸಂಘಟನೆಗಳ ಒಕ್ಕೂಟದಲ್ಲಿ ಈ ಸುದ್ಧಿಗೋಷ್ಠಿಯನ್ನು ನಡೆಸುತ್ತಿದ್ದು,ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ವಕೀಲರು ಮತ್ತು ಆರ್.ಟಿ.ಐ ಕಾರ್ಯಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧ ವಸೂಲಿ,ಕಿರುಕುಳ ಮೊದಲಾದ ಹಲವಾರು ದೂರುಗಳು ನೀಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯವಾಗಿದೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಪೊಲೀಸರು ನೇರ ಕಾರಣವಾಗುತ್ತಾರೆ. ನೊಂದವರಿಗೆ ರಕ್ಷಣೆ ನೀಡಬೇಕಿರುವುದು ಪೊಲೀಸರ ಕರ್ತವ್ಯ ಎಂದರು.
ರಶ್ಮಿ ಎನ್ನುವವರು ಮಾತನಾಡಿ,ನಮ್ಮ ಮನೆಯ ಮುಂದೆ ವಾಸ ಮಾಡುತ್ತಿರುವ ವಕೀಲರು ಹಾಗೂ ಆರ್.ಟಿ.ಐ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಜಿ.ವೆಂಕಟೇಶ್ ಎಂಬ ವ್ಯಕ್ತಿ ನನ್ನೊಡನೆ ಅವಾಚ್ಯ ಶಬ್ದಗಳನ್ನು ಬಳಸಿ ಅಸಭ್ಯವಾಗಿ ವರ್ತಿಸಿದ್ದು ಆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಸುಮಾರು 15 ದಿನ ಕಳೆದರೂ ಯಾವುದೇ ಕ್ರಮ ಕೈಗಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ವಕೀಲ ಆಂಜನೇಗೌಡ ಮಾತನಾಡಿದ,ಜನ ಸಾಮಾನ್ಯನೊಬ್ಬ ತಪ್ಪು ಮಾಡಿದರೆ ಆತನನ್ನು ತಕ್ಷಣವೇ ಕಠಿಣ ಶಿಕ್ಷಗೆ ಒಳಪಡಿಸುವ ಪೊಲೀಸರು,ಈ ವ್ಯಕ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಜಾಣ ಕುರುಡಾಗಿದೆ.ಇಂತಹವರ ಈ ಕೃತ್ಯದಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ.ವಕೀಲರು ತಪ್ಪು ಮಾಡಿದರೆ ವಕೀಲರ ಪರಿಷತ್ತು ಶಿಸ್ತು ಕ್ರಮ ಕೈಗೊಳ್ಳುತ್ತದೆ. ಜನಸಾಮಾನ್ಯರಿಗೂ ವಕೀಲರಿಗೂ ಒಂದೇ ಕಾನೂನು.ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ.ಪೊಲೀಸ್ ಅಧಿಕಾರಿಗಳ ಈ ನಡೆ ನೋವಿನ ಸಂಗತಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು,ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್,ನಗರಸಭೆ ಮಾಜಿ ಸದಸ್ಯ ಪ್ರಕಾಶ್,ಬಿಜೆಪಿ ಮುಖಂಡ ರೋಜಿಪುರ ರಘು, ಕರುನಾಡ ಸೇನೆಯ ತಾಲೂಕು ಅದ್ಯಕ್ಷ ತೆರದಾಳ್ ಶ್ರೀನಿವಾಸ್,ಯೋಗಿ ನಾರಾಯಣ ಬಡಾವಣೆಯ ನರೇಂದ್ರ,ಶ್ರೀನಿವಾಸ್,ಪತ್ರಕರ್ತರಾದ ಮುನಿಕೃಷ್ಣ,ಎಚ್.ಎಸ್.ವೆಂಕಟೇಶ್ ಮುಂತಾದವರು ಹಾಜರಿದ್ದರು.
ಅಕ್ರಮ ಮುಚ್ಚಿಡಲು ಸುಳ್ಳು ಆರೋಪ – ನ್ಯಾಯವಾದಿ ಜಿ.ವೆಂಕಟೇಶ್
ಅಕ್ರಮವಾಗಿ ಕಟ್ಟಿರುವ ಕಟ್ಟಡ ಕುರಿತು,ನಗರಸಭೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ದ ಸುಳ್ಳು ಆರೋಪ ಮಾಡಿದ್ದು,ಪ್ರಕರಣದಿಂದ ಹಿಂದೆ ಸರಿಸುವ ಶಡ್ಯಂತ್ರ ರೂಪಿಸಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಬಾಡಿಗೆಯಲ್ಲಿರುವವರನ್ನು ಬಳಸಿಕೊಂಡು ನನ್ನ ವಿರುದ್ದ ನಿರಾದಾರ ಆರೋಪ ಮಾಡಿದ್ದು,ಇವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದೆಂದು ನ್ಯಾಯವಾದಿ ವೆಂಕಟೇಶ್ ಹರಿತಲೇಖನಿಗೆ ತಿಳಿಸಿದ್ದಾರೆ.