ಬೆಂಗಳೂರು : ಕೃಷಿ ಇಲಾಖೆಯಿಂದ ಬೀಜ ಹಂಚಿಕೆ ಮಾಡುವಾಗ ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಲೆಗಾರರ ಮಹಾ ಮಂಡಲ ಕಚೇರಿಯಲ್ಲಿ ಮುಂಗಾರು ಹಂಗಾಮಿಗೆ ‘ಎಣ್ಣೆ ಕಾಳು ಬೀಜ ದಾಸ್ತಾನು ನೆಲಗಡಲೆ) ಹಾಗೂ ಪೂರೈಕೆ ಕುರಿತು(ಕುರಿತು ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದು ಕೃಷಿ ಸಚಿವನಾಗಿರುವ ತಮ್ಮ ಕರ್ತವ್ಯ. ರೈತರ ಬದುಕು ಸಂಪೂರ್ಣವಾಗಿ ಭೂಮಿ ಮೇಲೆ ಅವಲಂಬಿತವಾಗಿರುವುದರಿಂದ ರೈತನಿಗೆ ಯಾವುದೇ ಕಾರಣಕ್ಕೂ ನಕಲಿ, ಕಳಪೆ ಬೀಜ ವಿತರಣೆಯಾಗಬಾರದು ಎಂದು ಪಣತೊಟ್ಟಿದ್ದು, ಕೃಷಿ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಮಾರು 11 ಸಾವಿರ ಕ್ವಿಂಟಲ್ ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜವನ್ನು ಪತ್ತೆ ಹಚ್ಚಲಾಗಿದೆ ಎಂದು ಪುನರುಚ್ಚರಿಸಿದರು.
ಕೃಷಿ ಸಚಿವನಾಗಿ ಕೃಷಿ ಮತ್ತು ಇಲಾಖೆಗೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳುವುದು ನನ್ನ ಕರ್ತವ್ಯ. ಮುಂಗಾರು ಪ್ರಾರಂಭವಾಗುತ್ತಿದ್ದು, ರೈತರಿಗೆ ಅಗತ್ಯವಾದ ಬೀಜ ಪೂರೈಕೆ ಸಂಬಂಧ ಬೀಜ ನಿಗಮದೊಂದಿಗೆ ಚರ್ಚಿಸಲಾಗಿದೆ.ನಿಗಮದಲ್ಲಿರುವ ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಲಾಗಿದೆ. ಉತ್ತಮ ಗುಣಮಟ್ಟದ ಬೀಜ ಪೂರೈಕೆಗೆ ಗಮನಹರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರೈತರು 10 ವರ್ಷದ ಹಿಂದಿನ ಶೇಂಗಾ (ನೆಲಗಡಲೆ) ಬೀಜ ಖರೀದಿಸುವಾಗ ಯಾವುದೇ ಸಬ್ಸಿಡಿ ದೊರೆಯುವುದಿಲ್ಲ.ಹೀಗಾಗಿ ನಮ್ಮ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿಗಳಿಗೆ ಉತ್ತಮ ನೂತನ ಶೇಂಗಾ ತಳಿಗಳನ್ನು ವಿಶ್ವವಿದ್ಯಾಲಯದಿಂದ ಕಂಡುಹಿಡಿಯುವಂತೆ ಸೂಚಿಸಲಾಗಿದೆ ಎಂದರು.
ಮೆಕ್ಕೆಜೋಳ, ಶೇಂಗಾ ಸೇರಿದಂತೆ ಎಲ್ಲಾದಕ್ಕೂ ಮುಂದಿನ ದಿನಗಳಲ್ಲಿ ಏಕರೂಪ ಬೆಲೆ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ ಲಾಕ್ಡೌನ್ ಸಮಯದಲ್ಲಿ ನಷ್ಟವಾದ ಹೂವುಹಣ್ಣು,ತರಕಾರಿ ಬೆಳೆಗಳಿಗೆ ಪರಿಹಾರ ಘೋಷಿಸಲಾಗಿದೆ. ಮೆಕ್ಕೆಜೋಳಕ್ಕೂ ಪರಿಹಾರ ಘೋಷಿಸಲಾಗಿದೆ. ಇದರೊಂದಿಗೆ ವಿವಿಧ ವೃತ್ತಿಪರ ಕಾರ್ಮಿಕರಿಗೆ ಸಮುದಾಯದವರಿಗೆ ಸರ್ಕಾರ ಪರಿಹಾರ ಘೋಷಿಸಿದೆ ಎಂದು ಕೃಷಿ ಸಚಿವರು ತಿಳಿಸಿದರು.ಇದೇ ವೇಳೆ ಸಚಿವ ಕೆಓಎಫ್ ( ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ) ಸಂಸ್ಥೆಯಿಂದ ಉದ್ದಿನ ಬೆಳೆ ಮೌಲ್ಯವರ್ಧಿತ ವಿವಿಧ ಉತ್ಪನ್ನ ಬಿಡುಗಡೆ ಮಾಡಿದರು. ಸಭೆಯಲ್ಲಿ ಮಹಾಮಂಡಳಿಯ ಅಧ್ಯಕ್ಷರೂ ಆಗಿರುವ ಸಂಸದರಾದ ಅಣ್ಣಾಸಾಹೇಬ ಶಂಕರ್ ಜೊಲ್ಲೆ, ಉಪಾಧ್ಯಕ್ಷ ಶಂಕ್ರಪ್ಪಗೌಡ, ಮಾಜಿ ಅಧ್ಯಕ್ಷರು ಹಾಗೂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಬಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.