ದೊಡ್ಡಬಳ್ಳಾಪುರ: ನಾವು ನೀಡುವ ರಕ್ತ ಮತ್ಯಾರದೋ ಪ್ರಾಣವನ್ನು ಉಳಿಸುತ್ತದೆ ಅಂದರೆ ಅದಕ್ಕಿಂತಲು ಖುಷಿಯ ವಿಚಾರ ಬೇರೆ ಯಾವುದೂ ಇಲ್ಲ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.
ಅವರು ನಗರದಲ್ಲಿ ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಕೆಂಪರಾಜ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕರೀಗೌಡ ಅವರು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಆರೋಗ್ಯವಂತರು ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ಷಕ್ಕೆ ಮೂರ ರಿಂದ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ. ಅದೆಷ್ಟೊ ಜನರಿಗೆ ರಕ್ತದಾನ ಮಾಡಬೇಕು ಎನ್ನುವ ಆಸೆ ಇದ್ದರು ಸಹ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳಿಂದ ಸಾಧ್ಯವಾಗುವುದಿಲ್ಲ. ನಮ್ಮ ಆರೋಗ್ಯ ಸರಿಯಾಗಿರುವ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ನಮಗೆ ಅರಿವಿಲ್ಲದಂತೆ ಹತ್ತಾರು ಜೀವಗಳನ್ನು ಉಳಿಸಲು ಇರುವ ಏಕೈಕ ಮಾರ್ಗ ರಕ್ತದಾನ ಮಾಡುವುದೇ ಅಗಿದೆ.ಲಾಕ್‌ಡೌನ್ ಆರಂಭವಾದ ನಂತರ ಹಲವಾರು ಕಾರಣಗಳಿಂದ ರಕ್ತದಾನ ಶಿಬಿರಗಳನ್ನು ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಆದರೆ ರಕ್ತ ದೊರೆಯದಾಗಿದೆ. ಜನ್ಮದಿನಗಳು ಸೇರಿದಂತೆ ಹತ್ತಾರು ಸಂದರ್ಭಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ರಕ್ತ ಸಂಗ್ರಹವನ್ನು ಮಾಡುವ ಕೆಲಸ ನಡೆಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ, ವಿ.ಆಂಜಿನಪ್ಪ, ಸಿ.ವಿ.ಲಕ್ಷ್ಮೀಪತಯ್ಯ, ಪಿ.ಸಿ.ಲಕ್ಷ್ಮೀನಾರಾಯಣ್, ವಡ್ಡರಹಳ್ಳಿರವಿ, ಶಿವಕುಮಾರ್, ಜಿ.ಸತ್ಯನಾರಾಯಣ್, ಮಂಜುನಾಥರೆಡ್ಡಿ, ಅಖಿಲೇಶ್ ಇದ್ದರು.