ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ಹರ ಮ್ಯೂಸಿಕಲ್ ವಲ್ರ್ಡ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ ಸಂಯುಕ್ತಾಶ್ರಯಲ್ಲಿ ಬುಧವಾರ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಂಭಾಗಣದಲ್ಲಿ ಆಯೋಜಿಸಲಾಗಿದ್ದ ‘ಕರೊನಾ ಇದು ಸರಿನಾ’ ಎಂಬ ಧ್ವನಿ ಸುರುಳಿ ಬಿಡುಗಡೆ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿಗಳು, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕದಳ ಸೇರಿದಂತೆ ಕೊರೊನಾ ವಿರುದ್ದ ಹೋರಾಡುತ್ತಿರುವ ಕರೊನಾ ಸೈನಿಕರಿಗೆ ಮತ್ತು ಪೌರ ಕಾರ್ಮಿಕರಿಗೆ, ಡಿಸಿ, ಎಸ್ಪಿ ಸೇರಿದಂತೆ ಜಿಲ್ಲಾಡಳಿತದ ವತಿಯಿಂದ ಹೂ ಮಳೆ ಸುರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ.ಎಸ್.ಷಡಾಕ್ಷರಿ ಮಾತನಾಡಿ, ಕೋವಿಡ್-19 ಸಂಬಂಧಿಸಿದಂತೆ ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ಸರ್ಕಾರಿ ನೌಕರರು ಕೋವಿಡ್ ವಿರುದ್ದ ಹೋರಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹದಲ್ಲಿ ನೆರೆ ಸಂತ್ರಸ್ತರ ಪರವಾಗಿ ಹಾಗೂ ಲಾಕ್‍ಡೌನ್ ಸಮಯದಲ್ಲಿ ತಮ್ಮ ಒಂದು ದಿನದ ವೇತನ ಒಟ್ಟು ರೂ. 200 ಕೋಟಿಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ ಎಂದರು.
ಗ್ರಾಮ ಮಟ್ಟದಲ್ಲಿ ಪಿಡಿಓ ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹಲವು ಇಲಾಖೆಗಳ ಸರ್ಕಾರಿ ನೌಕರರು ಕೊರೊನಾ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಉತ್ತರ ಕರ್ನಾಟಕದದಲ್ಲಿ ನೆರೆ ಸಂಭವಿಸಿದಾಗಲೂ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಸರ್ಕಾರಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ದೆಹಲಿ, ತಮಿಳುನಾಡು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರ್ಕಾರಿ ನೌಕರರು ಹೆಚ್ಚು ವೇತನವನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದು ಪ್ರಶಂಸಿದ ಅವರು ಮುಂದಿನ ದಿನಗಳಲ್ಲಿ ಜ್ಯೋತಿ ಸಂಜೀವಿನಿ ಯೋಜನೆಯ ಮೂಲಕ ನೌಕರರಿಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಕೋವಿಡ್-19 ಸಂಬಂಧ ಯಾವ ನೌಕರರು ಭಯ ಪಡುವುದು ಬೇಡ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಸರ್ಕಾರಿ ನೌಕರರ ವೇತನ ಮತ್ತು ಡಿಎ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗುವದು. ಸರ್ಕಾರ ನಮ್ಮೊಂದಿಗಿದೆ. ನೌಕರರು ಈ ಕುರಿತು ಯಾವುದೇ ಆತಂಕಕ್ಕೆ ಒಳಪಡುವುದು ಬೇಡ. ಜೊತೆಗೆ ಜಿಲ್ಲಾಧಿಕಾರಿಗಳು ನೌಕರರ ಪರವಾಗಿದ್ದಾರೆ. ಈ ಮೂಲಕ ನಮ್ಮೆಲ್ಲರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ಸರ್ಕಾರಿ ನೌಕರರು ಒಟ್ಟು 13 ಕಂಟೈನ್‍ಮೆಂಟ್ ಜೋನ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಕೋವಿಡ್ ಸೋಂಕಿತರು ಇನ್ನೂ ಹೆಚ್ಚಾದರು ಸಹ ಸರ್ಕಾರಿ ನೌಕರರು ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ ಎಂಬ ಭರವಸೆಯಿದೆ ಎಂದ ಅವರು ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಎಲ್ಲಾ ಸರ್ಕಾರಿ ನೌಕರರು ಕೋವಿಡ್ ಯುದ್ದದಲ್ಲಿ ಹೋರಾಡಲು ಭಾಗಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹನುಮಂತರಾಯ ಮಾತನಾಡಿ, ಕೋವಿಡ್-19 ನಿಂದ ಜಿಲ್ಲೆ ಇನ್ನೂ ಮುಕ್ತವಾಗಿಲ್ಲ. ಸಾರ್ವಜನಿಕರು ತುಂಬಾ ಜಾಗರೂಕತೆಯಿಂದ ಇರಬೇಕು. ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಹಣಕಾಸಿನ ಅನುಕೂಲಕ್ಕಾಗಿ ಇಂದು ಮೊಬೈಲ್ ಎ.ಟಿ.ಎಂ ಅನ್ನು ಉದ್ಘಾಟನೆ ಮಾಡುತ್ತಿದ್ದೇವೆ. ಲಾಕಡೌನ್ ಸಮಯದಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಲಾಗಿದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಬಿ. ಪಾಲಾಕ್ಷಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸರ್ಕಾರಿ ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.