ದೊಡ್ಡಬಳ್ಳಾಪುರ : ಶಾಲೆಗಳನ್ನು ತರಾತುರಿಯಲ್ಲಿ ಪ್ರಾರಂಭ ಮಾಡುವ ಯಾವುದೇ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಆರೋಗ್ಯಕರ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ.ಆದರೆ “ಖಾಸಗಿ ಲಾಬಿ ಪ್ರಭಾವಕ್ಕೆ ಮಣಿದಿರುವ ಸರ್ಕಾರ” ಎಂಬಂತೆ ಬಿಂಬಿತವಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡುತ್ತದೆ.ಮಕ್ಕಳಲ್ಲಿ ಕಲಿಕೆಯನ್ನು ನಿರಂತರವಾಗಿ ಇಡಲು ದೂರದರ್ಶನದ ಪ್ರತ್ಯೇಕ ಶಿಕ್ಷಣ ಚಾನೆಲ್ ಪ್ರಾರಂಭಿಸುವುದೂ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಶೋಧಿಸುತ್ತಿದೆ.
ಈ ಅಂಶಗಳನ್ನು ಅರ್ಥೈಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಟೀಕೆಗಳನ್ನು ಗಮನಿಸಿದ್ದೇನೆ.
ಎಳೆಯ ಮಕ್ಕಳ ಕುರಿತ ಪೋಷಕರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ ಮತ್ತು ಆ ಕಾಳಜಿಗೆ ಅಗತ್ಯ ಮನ್ನಣೆ ನೀಡುತ್ತೇನೆ. ಆ ಮಕ್ಕಳಿಗೆ ಮತ್ತು ಪೋಷಕರಿಗೆ ಕಿಂಚಿತ್ ಆಪತ್ತು ತರುವ ಯಾವುದೇ ಕಾರ್ಯ ನಮ್ಮಿಂದ ಆಗುವುದಿಲ್ಲ.ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಿಸುವ ಅತಿ ದೊಡ್ಡ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಸರಕಾರದ ಪ್ರತಿ ಹೆಜ್ಜೆ ಸಂವೇದನಾಶೀಲತೆಯಿಂದ ಕೂಡಿರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.
ಎಲ್ಲಾ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಜೂನ್ 10, 11 ಮತ್ತು 12 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ (ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳೂ ಸೇರಿದಂತೆ) ಪೋಷಕರ ಸಭೆ ಕರೆದು ಕೆಳ ಕಂಡ 3 ಅಂಶಗಳ ಕುರಿತು ಅಭಿಪ್ರಾಯ ಸಂಗ್ರಹಿಸಬೇಕೆಂದು 1.6.2020 ರ ಸುತ್ತೋಲೆಯ ಮೂಲಕ ಸೂಚಿಸಿದೆ.
ಅ) ಶಾಲೆಗಳನ್ನು ಯಾವಾಗ (ಎಂದಿನಿಂದ) ಪ್ರಾರಂಭ ಮಾಡಬೇಕು?
* ನರ್ಸರಿ ಮತ್ತು ಪ್ರಾಥಮಿಕ ತರಗತಿಗಳು.
* ಉನ್ನತ ಪ್ರಾಥಮಿಕ ತರಗತಿಗಳು.
* ಪ್ರೌಢಶಾಲಾ ತರಗತಿಗಳು.
ಆ) ಕೊರೋನಾ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಗತಿಗಳನ್ನು ನಡೆಸುವ ಬಗ್ಗೆ.
ಇ) ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮಗಳು.