ಕಲಬುರಗಿ: ಕರೊನಾ ಸಂಕಷ್ಟದ ಈ ಸಮಯದಲ್ಲಿ ವಲಸೆ ಬಂದ ಹಾಗೂ ಲಾಕ್ ಡೌನ್‍ದಿಂದ ಮನೆಯಲ್ಲಿರುವ ರೈತಾಪಿ ವರ್ಗದ ದುಡಿಯುವ ಕೈಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರವಾಗಿದ್ದು, ಈ ಯೋಜನೆಯಡಿ ಕೆರೆ ಹೂಳೆತ್ತುವ, ಬದು ನಿರ್ಮಾಣ, ಚೆಕ್ ಡ್ಯಾಂದಂತಹ ಕಾಮಗಾರಿಗಳು ರಾಜ್ಯದಾದ್ಯಂತ ಭರದಿಂದ ಸಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶುಕ್ರವಾರ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ರೈತರ ಜಮೀನಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿದ್ದ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 6021 ಗ್ರಾಮ ಪಂಚಾಯತಿಗಳ ಪೈಕಿ 5900 ಗ್ರಾ.ಪಂ.ಗಳಲ್ಲಿ ಈಗಾಗಲೆ ಉದ್ಯೋಗ ಖಾತ್ರಿ ಕೆಲಸಗಳು ಆರಂಭಿಸಲಾಗಿದೆ. ಗ್ರಾಮ ಪಂಚಾಯತಿಯ ಪ್ರತಿ ಹಳ್ಳಿಯಲ್ಲಿ ಕೆಲಸಗಳನ್ನು ಕಾಣಬಹುದಾಗಿದೆ ಎಂದರು.
ಪ್ರತಿ ಕೂಲಿ ಕಾರ್ಮಿಕನಿಗೂ ಉದ್ಯೋಗ ಸಿಗಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ರೂ. ಜೊತೆಗೆ ಇತ್ತೀಚೆಗೆ ಕೊರೋನಾ ಪ್ಯಾಕೇಜ್ ಘೋಷಣೆ ಮಾಡಿದ ಮೊತ್ತದಲ್ಲಿ 20 ಸಾವಿರ ಕೋಟಿ ರೂ. ನರೇಗಾ ಕೆಲಸಗಳಿಗೆ ಮೀಸಲಿರಿಸಿದೆ ಎಂದರು.
ಉದ್ಯೋಗ ಖಾತ್ರಿ ಕೂಲಿ ಹಣ ಪಾವತಿಗೆ ಬಾಕಿ ಇದ್ದ 1860 ಕೋಟಿ ರೂ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ್ದು, ಇನ್ನೂ ಮುಂದೆ ಕೂಲಿ ಪಾವತಿಗೆ ಯಾವುದೇ ಸಮಸ್ಯೆವಿಲ್ಲ. ಕೆಲಸ ಮುಗಿದ ವಾರದಲ್ಲಿಯೆ ಕೂಲಿ ಹಣ ಖಾತೆಗೆ ಜಮಾವಾಗಲಿದೆ. ಇದಲ್ಲದೆ ಪ್ರಸ್ತುತ ಈ ಯೋಜನೆಯಡಿ ಕೂಲಿ ಪಾವತಿಗೆಂದೆ ರಾಜ್ಯ ಸರ್ಕಾರದ ಬಳಿ 1000 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು.
ಪ್ರತಿ ದಿನಕ್ಕೆ ನೀಡುತ್ತಿದ್ದ ಕೂಲಿ ಮೊತ್ತ 249 ರಿಂದ 275ಕ್ಕೆ ಹೆಚ್ಚಿಸಲಾಗಿದೆ. ಇದಲ್ಲವೆ ಪ್ರತಿ ವ್ಯಕ್ತಿಗೆ ಕೂಲಿ ದಿನಗಳನ್ನು ಸಹ 150ಕ್ಕೆ ಹೆಚ್ಚಿಸಲು ಕ್ರಮ ವಹಿಸಿದೆ. ಉದ್ಯೋಗ ಕೇಳಿ ಬರುವ ಎಲ್ಲಾ ಅರ್ಹರಿಗೆ ಉದ್ಯೋಗ ನೀಡಲಾಗುತ್ತದೆ ಎಂದ ಸಚಿವರು ರೈತರು ತಮ್ಮ ಹೊಲದಲ್ಲಿ ಪಪ್ಪಾಯ, ಬಾಳೆ ಬೆಳೆಯಲು ಇನ್ನೂ ಮುಂದೆ ಅವಕಾಶ ನೀಡಲಾಗುತ್ತದೆ ಎಂದರು.
ನರೇಗಾದಡಿ ಬಳ್ಳಾರಿ ಪ್ರಥಮ, ಕಲಬುರಗಿ ದ್ವಿತೀಯ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಾಧಿಕ 1.30 ಲಕ್ಷ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ರಾಜ್ಯದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ. ತದನಂತರದ ಸ್ಥಾನ ಕಲಬುರಗಿ ಮತ್ತು ರಾಯಚೂರು ಜಿಲ್ಲೆಯದಾಗಿದ್ದು, ಇಲ್ಲಿ 1.10 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಅಂತರ್ಜಲ ಹೆಚ್ಚಳಕ್ಕೆ “ ಅಂತರ್ಜಲ ಚೇತನ ”: ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಪುಷ್ಕರಣಿ, ಗೋಕಟ್ಟಾ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಾರ್ವಜನಿಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಜ್ಜೆ ಇಟ್ಟಿದ್ದೇವೆ. ಈ ಸಂಬಂಧ ಆರ್ಟ್ ಆಫ್ ಲೀವಿಂಗ್‍ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು “ ಅಂತರ್ಜಲ ಚೇತನ ” ಎಂಬ ನೂತನ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಟ್ಟು ನೀರೆರೆದರು. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳು ಸಾಥ್ ನೀಡಿದರು.
ಗೋಕಟ್ಟಾ ವೀಕ್ಷಣೆ: ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೊನ್ನಕಿರಣಗಿ ಗ್ರಾಮದಲ್ಲಿ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ಗೋಕಟ್ಟಾದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಸಂಗ್ರಹಣೆಗೊಂಡಿರುವುದುನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಾಜಿ, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಸದಸ್ಯರಾದ ದಿಲೀಪ್ ಪಾಟೀಲ, ರೇವಣಸಿದ್ದಪ್ಪ ಸಂಕಾಲಿ, ಸಂಜೀವನ್ ಯಾಕಾಪುರ, ಅರವಿಂದ ಚವ್ಹಾಣ, ಶಿವಶರಣ ಶಂಕರ, ತಾಲೂಕು ಪಂಚಾಯತ್ ಅಧ್ಯಕ್ಷ ಶಿವರಾಜ ಸಜ್ಜನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಗದೇವಿ ಗುರುನಾಥ ಜುಲ್ಫಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಪಿ.ಡಿ.ಓ ಮೇನಕಾ ಜಾಧವ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.