ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಜೂನ್ 8 ರಿಂದ ಷರತ್ತಿಗೆ ಒಳಪಟ್ಟು ತೆರೆಯಲು ಅನುಮತಿ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
ದೇವಾಲಯಗಳ ಪ್ರವೇಶದ್ವಾರ ಹಾಗೂ ಆವರಣದಲ್ಲಿ ಸ್ವಚ್ಚತೆ ಕಾಪಾಡಲು ಕ್ರಮ ವಹಿಸಬೇಕು. ಭಕ್ತಾಧಿಗಳ ದೇಹದ ಉಷ್ಣತೆ ತಪಾಸಣೆಗಾಗಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ದೇವಾಲಯದ ಶೌಚಾಲಯವನ್ನು ಆಗ್ಗಿಂದಾಗ್ಗೆ ಸ್ವಚ್ಚಗೊಳಿಸಲು ಕ್ರಮವಹಿಸುವುದು.
ದೇವಾಲಯದ ಆವರಣ ಪ್ರವೇಶಿಸುವ ಭಕ್ತಾಧಿಗಳು ಹಾಗೂ ದೇವಾಲಯ ಸಿಬ್ಬಂದಿಗಳು ಕಡ್ಡಾಯವಾಗಿ ಅವರವರ ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ಅನ್ನು ಹೊಂದಿರಬೇಕು.
ಭಕ್ತಾಧಿಗಳು ಪಾದರಕ್ಷೆಗಳನ್ನು ಬಂದಿರುವ ವಾಹನದಲ್ಲೇ ಅಥವಾ ಪ್ರತ್ಯೇಕವಾಗಿ ಇಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇವಾಲಯ ಸಿಬ್ಬಂದಿ ಅಗತ್ಯ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಮಾಸ್ಕ್ ಧರಿಸುವ ಭಕ್ತಾದಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಾಗಿದೆ.
ದೇವಾಲಯ ಪ್ರವೇಶಿಸುವ ಭಕ್ತಾಧಿಗಳು ವಿಗ್ರಹಗಳು ಹಾಗೂ ಪವಿತ್ರ ಗ್ರಂಥಗಳನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆಗಳು, ಉತ್ಸವಗಳನ್ನು ಆಯೋಜಿಸುವುದನ್ನು ಹಾಗೂ ಪರಸ್ಪರ ಸಂಪರ್ಕಿಸುವುದನ್ನು ನಿಷೇಧಿಸಿದೆ.
ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ.
65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರು ಆದಷ್ಟು ಮನೆಯಲ್ಲಿಯೇ ಇಂದು ಸಹಕರಿಸಬೇಕು. ಅಸ್ವಸ್ಥರು ದೇವಾಲಯದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.