ದೊಡ್ಡಬಳ್ಳಾಪುರ: ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿ ಖಂಡಿಸಿ ಮತ್ತು ಅಕ್ರಮ ಸಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡ ಪಕ್ಷದ ವತಿಯಿಂದ ಬುಧವಾರ ನಗರಸಭಾ ಕಾರ್ಯಾಲಯದ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವ್ನಾಯ್ಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಲಾಕ್ಡೌನ್ ಜಾರಿಯಿಂದಾಗಿ ನೇಕಾರಿಕೆ ಉದ್ಯಮ ಅತ್ಯಂತ ಹದೋಗತಿಗೆ ತಲುಪಿದೆ. ಜನರು ಜೀವನ ಮಾಡುವುದೇ ದುಸ್ದರವಾಗಿರುವ ಈ ಸಂದರ್ಭದಲ್ಲಿಯೇ ಶೇ18ರಷ್ಟು ತೆರಿಗೆಯನ್ನು ಹೆಚ್ಚು ಮಾಡಿರುವು ಖಂಡನೀಯ. ಸರ್ಕಾರದ ಈ ಅವೈಜ್ಞಾನಿಕ ತೆರಿಗೆ ನೀತಿ ರದ್ದು ಮಾಡಬೇಕು, ಪ್ರಸ್ತುತ ಎರಡು ತಿಂಗಳಿಗೆ ಸೀಮಿತವಾಗಿರುವ ಶೇ5 ತೆರಿಗೆ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕು. ಅಧಿಕೃತವಾಗಿ ದಾಖಲಾಗಿರುವ ಎಂ.ಎ.ಆರ್-19 ಖಾತಾ ಸ್ವತ್ತುಗಳಿಗೆ ಖಾತೆ ಬದಲಾವಣೆ ಮತ್ತು ಮನೆ ಕಟ್ಟಿಕೊಳ್ಳಲು ಪರವಾನಗಿ ಪತ್ರ ನೀಡದೇ ಇರುವುದರಿಂದ ಜನ ಸಾಮಾನ್ಯರಿಗೆ ಮನೆಗಳನ್ನು ಕಟ್ಟಲು ಬ್ಯಾಂಕುಗಳಿಂದ ಸಾಲ ಸೌಲಭ್ಯಗಳು ದೊರೆಯದಂತಾಗಿದೆ ಎಂದರು.
ನಗರಸಭೆ ಸದಸ್ಯರ ಅಧಿಕಾರ ಅವಧಿ ಮುಗಿದು ಒಂದು ವರ್ಷ ಕಳೆಯುತ್ತ ಬಂದರು ಸಹ ಚುನಾವಣೆ ನಡೆಸದೆ ಸರ್ಕಾರ ಇಲ್ಲಸಲ್ಲದ ನೆಪಗಳನ್ನು ಹೇಳುತ್ತಲೇ ಬರುತ್ತಿದೆ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೆ ನಗರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಮಳೆಗಾಲ ಆರಂಭವಾಗುತ್ತಿರುವ ಈ ದಿನಗಳಲ್ಲಿ ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಕೊಳಚೆ ನೀರು ನಿಂತು ಕೊರೊನಾ ಜೊತೆಗೆ ಸೊಳ್ಳೆಗಳಿಂದಲು ರೋಗಗಳು ಬರಲು ಆರಂಭವಾಗುವ ಅಪಾಯವಿದೆ ಎಂದರು.
ವಿವಿಧ ಬೇಡಿಕೆಗಳ ಮನವಿಯನ್ನು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಮುಖಂಡರಾದ ಮಂಜುಳಾ ಆಂಜನೇಯ, ಪರಮೇಶ್, ವೆಂಕಟೇಶ್, ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘಧ ಪದಾಧಿಕಾರಿಗಳು,ರಾಜ್ಯ ರೈತ ಸಂಘದ,ತಾಲ್ಲೂಕು ಶಿವರಾಜ್ ಸೇನಾ ಸಮಿತಿ, ಸಿಪಿಐಎಂ ಪಕ್ಷದ ಪದಾಧಿಕಾರಿಗಳು ಇದ್ದರು.