ಬೆಂಗಳೂರು,ಜೂನ್.13:ಕೋವಿಡ್ ಸಂದರ್ಭದಲ್ಲಿಯೂ ಕೃಷಿಕನ ಸಂಕಷ್ಟಕ್ಕೆ ನೆರವಾಗಲು ಕೃಷಿ ವಿಶ್ವವಿದ್ಯಾಲಯಗಳು ಜೊತೆ ನಿಂತಿವೆ. ಕೃಷಿ ಇಲಾಖೆಯ ಸಚಿವನಾಗಿರುವುದಕ್ಕೆ ಬಹಳ ಹೆಮ್ಮೆ ರೈತರಿಗಾಗಿ ದುಡಿಯುತ್ತಿರುವ ಆತ್ಮತೃಪ್ತಿ ತಮ್ಮದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವರ್ಚ್ಯುವಲ್ ಉಪನ್ಯಾಸ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಬಳಿಕ ಅಲ್ಲಿನ ಕುವೆಂಪು ಸಭಾಂಗಣದಲ್ಲಿ ಬೋಧಕ ಹಾಗೂ ಬೋಧಕೇತರ ಶಿಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕೃಷಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯಗಳು ಆದಷ್ಟು ಕೃಷಿಕರಿಗೆ ಹತ್ತಿರವಾಗಿರಬೇಕು. ಹೊಸಹೊಸ ಬೇಸಾಯಪದ್ಧತಿಗಳು, ಕಾಲ ಹವಾಮಾನ ಭೂಮಿಗನುಗುಣವಾಗಿ ಬೇಸಾಯ, ತಾಂತ್ರಿಕ ಬಳಕೆಗಳ ಬಗ್ಗೆ ಹೆಚ್ಚೆಚ್ಚು ಪ್ರಚುರ ಪಡಿಸಬೇಕು.ರೈತರು ಅಪ್ಪ ಹಾಕಿದ ಆಲದಮರವೆಂಬ ಮನಸ್ಥಿತಿಯಿಂದ ಹೊರಬಂದು ಕೃಷಿಯಲ್ಲಿ ನವೀನತೆ ಸಾಧಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅನ್ನವೇ ಸಿಗುತ್ತಿರಲಿಲ್ಲ.
ಸಂಕಷ್ಟಗಳು ಎದುರಾದಾಗ ಕೃಷಿಯನ್ನು ಯಾವ ರೀತಿ ಸವಾಲಾಗಿ ಸ್ವೀಕರಿಸಬಹುದೆಂಬುದರ ಬಗ್ಗೆ ವಿಜ್ಞಾನಿಗಳು ಹೆಚ್ಚೆಚ್ಚು ಅಧ್ಯಯಯನಶೀಲರಾಗಬೇಕು ಎಂದರು.
ಇಡೀ ಭಾರತ ದೇಶದಲ್ಲಿ ಕೃಷಿಗೆ ತನ್ನದೇ ಆದ ಮಹತ್ತರ ಪಾತ್ರ ಕೋವಿಡ್‌ನಿಂದ ಇತರ ಉದ್ಯಮಗಳಿಗೆ ಹೊಡೆತಬಿದ್ದಷ್ಟೂ ಕೃಷಿಗೆ ಬಿದ್ದಿಲ್ಲ.ಕೃಷಿ ಉದ್ಯಮ ದೇಶಕ್ಕೆ ಚೈತನ್ಯ ನೀಡಿದೆ.ಬೇರೆಬೇರೆ ಉದ್ಯಮಗಳಲ್ಲಿ ಪ್ರಗತಿ ಸಾಧಿಸುವಂತೆ ನಮ್ಮ ರೈತರು ಸಹ ಕೃಷಿಯಲ್ಲಿ ಹೊಸಹೊಸ ಆವಿಷ್ಕಾರ ಪ್ರಗತಿ ಮಾಡಬೇಕೆಂಬ ಅಭಿಲಾಷೆ ತಮ್ಮದಾಗಿದೆ.ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಹ ವಿಶ್ವವಿದ್ಯಾಲಯದಲ್ಲಿ ಹೊಸಹೊಸ ಆವಿಷ್ಕಾರಗಳಿಗೆ ಮುಂದಾಗಬೇಕೆಂದು ಕೃಷಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಪತಿ ಡಾ.ಎಸ್ ರಾಜೇಂದ್ರ ಪ್ರಸಾದ್ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಮಾಂಜನೇಯಗೌಡ ಮತ್ತು ಅರವಿಂದ್, ಡೀನ್ ಕೃಷಿ ಸಾವಿತ್ರಮ್ಮ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.