ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹೆಚ್ಚುವರಿಯಾಗಿ ಉದ್ಯೋಗಿನಿ, ಕಿರುಸಾಲ ಮತ್ತು ಸಮೃದ್ಧಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು, ಸ್ತ್ರೀ ಶಕ್ತಿ ಸಂಘಗಳು ಮತ್ತು ಬೀದಿಬದಿ ಮಹಿಳಾ ವ್ಯಾಪಾರಿಗಳು 2020 ಜೂನ್ 20 ರೊಳಗೆ ಅರ್ಜಿ ಸಲ್ಲಿಸುವುದು.
ಉದ್ಯೋಗಿನಿ ಯೊಜನೆ: ಸ್ವಯಂ ಉದ್ಯೋಗ ಮಾಡಲಿಚ್ಛಿಸುವಂತಹ 18-55 ವರ್ಷದೊಳಗಿನ, ಕುಟುಂಬದ ವಾರ್ಷಿಕ ಆದಾಯ ರೂ. 1,50,000/- ಆದಾಯ ಹೊಂದಿರುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕ್ನಿಂದ ರೂ. 1 ಲಕ್ಷದಿಂದ 5 ಲಕ್ಷಗಳ ವರೆಗೆ ಸಾಲ ಮತ್ತು ನಿಗಮದಿಂದ ಶೇ.70 ರಷ್ಟು ಸಹಾಯಧನ ಸೌಲಭ್ಯವನ್ನು ಈ ಯೋಜನೆಯಡಿ ಒದಗಿಸಲಾಗುವುದು. ಪ್ರತಿ ತಾಲ್ಲೂಕಿಗೆ ಪರಿಶಿಷ್ಟ ಜಾತಿಯ 2 ಮತ್ತು ಪರಿಶಿಷ್ಟ ಪಂಗಡದವರಿಗೆ 1ರಂತೆ ಭೌತಿಕ ಗುರಿ ನಿಗದಿಪಡಿಸಲಾಗಿದೆ.
ಕಿರುಸಾಲ ಯೋಜನೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಂದ ಗುಂಪು ಚಟುವಟಿಕೆ ನಡೆಸಲು ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಗುಂಪಿಗೆ ರೂ.1 ಲಕ್ಷದಿಂದ ರೂ.5ಲಕ್ಷಗಳವರೆಗೆ ಬಡ್ಡಿ ರಹಿತ ಸಾಲ ಒದಗಿಸಲಾಗುತ್ತದೆ. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು 5 ಗುರಿ ನಿಗಧಿಪಡಿಸಲಾಗಿದೆ. ಪರಿಶಿಷ್ಟ ಜಾತಿಯ 4ಗುಂಪಿಗೆ, ಮತ್ತು ಪರಿಶಿಷ್ಟ ಪಂಗಡದ 1 ಸ್ವ-ಸಹಾಯ ಸಂಘದ ಗುಂಪಿಗೆ ಸೌಲಭ್ಯ ಒದಗಿಸಲು ಅವಕಾಶವಿದ್ದು, ನಿಬಂಧನೆಗಳನುಸಾರ ಪ್ರಸ್ತಾವನೆ ಸಲ್ಲಿಸಬೇಕಿರುತ್ತದೆ.
ಸಮೃದ್ಧಿ ಯೋಜನೆ: ಪುರಸಭೆಗಳಿಂದ ಮತ್ತು ಗ್ರಾಮ ಪಂಚಾಯತಿಗಳಿಂದ ಬೀದಿ-ಬದಿ ವ್ಯಾಪಾರಿಗಳೆಂದು ಗುರುತಿನ ಚೀಟಿಯನ್ನು ಪಡೆದು ವ್ಯಾಪಾರ ನಡೆಸುತ್ತಿರುವಂತಹ, ಬಿ.ಪಿ.ಎಲ್. ಕಾರ್ಡ್ ಹೊಂದಿರುವ, 18 ರಿಂದ 60ವಯಸ್ಸಿನ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಯೋಜನೆಯಡಿ ತಲಾ ರೂ.10,000/-ಗಳ ಸಹಾಯಧನ ಸೌಲಭ್ಯ ಒದಗಿಸಲಾಗುವುದು. ಜಿಲ್ಲೆಗೆ ಒಟ್ಟು 24 ಬೌತಿಕ ಗುರಿ ನಿಗದಿಯಾಗಿದ್ದು, ಪ್ರತಿ ತಾಲ್ಲೂಕಿಗೆ 6 ರಂತೆ ವಿಭಜಿಸಲಾಗಿದೆ.
ಸೌಲಭ್ಯ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಅರ್ಜಿ ಪಡೆಯಲು, ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂ.: 206, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕಚೇರಿಯನ್ನು ಸಂಪರ್ಕಿಸಬಹುದುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರಾದ ಪುಷ್ಪಾ.ಜಿ.ರಾಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***********