ದಾವಣಗೆರೆ: ಸೋಮವಾರ ಹರಿಹರ ನಗರದ ಶೋರಾಪುರ ಗ್ರಾಮದಲ್ಲಿ ಗೃಹ ಮಂಡಳಿಯ ವಶದಲ್ಲಿರುವ ಜಮೀನು ಸ್ಥಳವನ್ನು ವಸತಿ ಸಚಿವರಾದ ವಿ. ಸೋಮಣ್ಣ ಪರಿವೀಕ್ಷಣೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಸಮೀಪದ ಶೋರಾಪುರದಲ್ಲಿ ಸುಮಾರು 54 ಎಕರೆ ಜಮೀನಿನಲ್ಲಿ ಒಂದು ಮಾದರಿ ಬಡಾವಣೆಯನ್ನು ಗೃಹ ಮಂಡಳಿಯಿಂದ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳು 20ರೊಳಗಾಗಿ ಕೆಲಸದ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಈ ಬಡಾವಣೆ ಮನೆಗಳಿಗಾಗಿ 35 ಸಾವಿರ ಅರ್ಜಿ ಬಂದಿವೆ. ಆದರೆ ಇದರಲ್ಲಿ 800 ರಿಂದ 900 ಸೈಟ್‍ಗಳಾಗುತ್ತವೆ. ಅದೇ ರೀತಿ ಶಾಸಕರು 8 ಎಕರೆ ಜಾಗ ಇದೆ. ಬಡವರಿಗಾಗಿ ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿದ್ದಾರೆ. ಬಡವರಿಗೆ ಅನುಕೂಲವಾಗುತ್ತದೆ ಎಂದರೆ ನೋಡಣಾ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ಮಾಡಿ ಬಡವರಿಗೆ ಮನೆ ಕೊಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸೂರಿಲ್ಲದವರಿಗೆ 2022ರೊಳಗಾಗಿ ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸುವ ಚಿಂತನೆಗೆ ಸುಮಾರು 10 ಲಕ್ಷ ಮನೆಗಳನ್ನು ಇನ್ನೂ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಮುಗಿಸಲು ಕ್ರಿಯಾ ಯೋಜನೆ ಮಾಡಿ ಕೆಲಸ ಕೂಡ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಪ್ರತಿಯೊಬ್ಬ ಬಡವರಿಗೂ ಮನೆ ಒದಗಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಅದಕ್ಕಾಗಿ ನಾವು 4,535 ಎಕರೆ ಜಾಗವನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಕೊಂಡಿದ್ದು,. 1.20 ಲಕ್ಷ ಸೈಟ್‍ಗಳನ್ನು ನಾಲ್ಕೈದು ತಿಂಗಳಲ್ಲಿ ಬೇಕಾದಂದಹ ಮೂಲಭೂತ ಸೌಕರ್ಯ ಒದಗಿಸಿ ಹಂಚುವ ಕೆಲಸ ಮಾಡಲಾಗುವುದು. 30 ವರ್ಷದಲ್ಲಿ ಇಡೀ ರಾಜ್ಯದಲ್ಲಿ 3 ಲಕ್ಷ ಸೈಟ್ ಕೊಡಲಾಗಿದೆ. ಆದರೆ 1.20 ಲಕ್ಷ ಸೈಟ್‍ಗಳನ್ನು ಇನ್ನು ಐದರಿಂದ ಆರು ತಿಂಗಳಲ್ಲಿ ಬಡವರಿಗೆ ನೀಡಲ್ಲಿದ್ದೇವೆ ಎಂದ ಅವರು, ಕೋವಿಡ್-19 ಕಡಿಮೆಯಾದ ಮೇಲೆ ಕೆಲಸ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಯುಎಲ್‍ಬಿ ಜಾಗಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಅದರಡಿಯಲ್ಲಿ ಈ ಬಾರಿ ರಾಜೀವ್‍ಗಾಂಧಿ ಯೋಜನೆಯಿಂದ 69 ಸಾವಿರ ಮನೆಗಳನ್ನು ಕಟ್ಟಲು ರಾಜ್ಯದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರು ಹಾಗೂ ಮೈಸೂರು ಹೊರತುಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಾಗಲೇ ಸಂಡೂರಿನಲ್ಲಿ 2 ಸಾವಿರ ಮನೆ, ನಿಪ್ಪಾಣಿಯಲ್ಲಿ 1,600 ಮನೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಸಾವಿರ ಮನೆ ಸೇರಿದಂತೆ ಅನೇಕ ಕಡೆ ಕೆಲಸ ಶುರು ಮಾಡಲಾಗಿದೆ. ಅದರಂತೆ ಇಲ್ಲಿ ಕೂಡ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಈಗಾಗಲೇ ಬಿ ಖಾತೆಯಲ್ಲಿರುವ ಮನೆಗಳನ್ನು ಎ ಖಾತೆ ಮಾಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರಸಭೆಗೆ ಹಣ ಬರುತ್ತದೆ. ಮಾಡುವುದಕ್ಕೆ ತೊಂದರೆ ಏನು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ಈ ಬಗ್ಗೆ ಕೂಡಲೇ ಪ್ರಪೋಸಲ್ ಮಾಡಿ ಕಳುಹಿಸಿ ಕೊಡಿ ಎಂದರು.
ಅವಾಸ್ ಯೋಜನೆಯಲ್ಲಿ ಮನೆ ಕಟ್ಟಿದವರಿಗೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಈಗ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ 5,40 ಲಕ್ಷ ಹಾಗೂ ಪಟ್ಟಣ ಪ್ರದೇಶದಲ್ಲಿ 4,60 ಲಕ್ಷ ಮನೆಗಳಿಗೆ ಹೊರತುಪಡಿಸಿ ಬೇರೆ ಮನೆಗಳಿಗೆ ಹಣ ಬಿಡುಗಡೆ ಮಾಡಲಾಗುವುದಿಲ್ಲ. ಇನ್ನುಳಿದಂತೆ ಒಂದೂವರೆ ವರ್ಷದಲ್ಲಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಮಪ್ಪ, ಮಾಜಿ ಶಾಸಕ ಹರೀಶ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
*************