ದೊಡ್ಡಬಳ್ಳಾಪುರ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ 22 ಮಂದಿ ವಿಕಲಚೇತನರಿಗೆ ದ್ವಿಚಕ್ರವಾಹನಗಳನ್ನು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಕಲಚೇತನರಿಗೆ ತಮ್ಮ ಅನುದಾನದಲ್ಲಿ 2013ರರಿಂದ ವಿವಿಧ ಪರಿಕರಗಳನ್ನು, ದ್ವಿಚಕ್ರವಾಹನಗಳನ್ನು ನೀಡಲಾಗುತ್ತಿದ್ದು, ಈ ಹಿಂದೆ ಇದ್ದ ಶಾಸಕರಿಂದ ಈ ರೀತಿ ಸೌಲಭ್ಯಗಳು ದೊರೆತಿರಲಿಲ್ಲ. ವಿಕಲಚೇತನರು ತಮಗೆ ಇರುವ ಅವಶ್ಯಕತೆಗಳ ಬಗ್ಗೆ ಅರ್ಜಿ ಸಲ್ಲಿಸಿದರೆ ಜಿಲ್ಲಾಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ ಎಂದ ಅವರು 2013ರಿಂದ ನೀಡಲಾಗಿರುವ ದ್ವಿಚಕ್ರವಾಹನಗಳು ಮೊದಲಾದ ಪರಿಕರಗಳು ಸದುಪಯೋಗವಾಗುತ್ತಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾಲೂಕನ್ನು ನಿರ್ಲಕ್ಷ್ಯ ಮಾಡುತ್ತಿದೆ.ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಬಳಿ ಸೇತುವೆ ನಿರ್ಮಿಸಲು 50 ಲಕ್ಷ ರೂ ಯೋಜನೆ ತಯಾರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮೀಣಾಭಿವೃದ್ದಿ ಸಚಿವರಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ತಾಲೂಕಿಗೆ ಮಂಜೂರಾಗಿರುವ 1.5 ಕೋಟಿರೂ ಹಣವನ್ನು ತಡೆ ಹಿಡಿಯಲಾಗಿದೆ. ಇವೆಲ್ಲಾ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯಾ ಎಂದೆನಿಸುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್,ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಗ್ರಾಮಾಂತರ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಂ.ನಾಗೇಶ್, ಯೋಜನಾ ಸಹಾಯಕ ನಿಖಿಲ್ ಎಂ.ಮದಗಟ್ಟಿ,ಕಾಂಗ್ರೆಸ್ ತಾಲೂಕು ಬ್ಲಾಕ್ ಅಧ್ಯಕ್ಷ ಬೈರೇಗೌಡ ಮತ್ತಿತರರಿದ್ದರು.