ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಇಂಗ್ಲೀಷ್ ಯಶಸ್ವಿಯಾಗಿದ್ದು, ನೋಂದಾಯಿತ ಹೊರಜಿಲ್ಲೆಯ 204 ವಿದ್ಯಾರ್ಥಿಗಳು ಸೇರಿದಂತೆ 8,688 ವಿದ್ಯಾರ್ಥಿಗಳ ಪೈಕಿ 8,347 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಹೊರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 341 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕಲಾವತಿ ಅವರು ತಿಳಿಸಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಹಿನ್ನೆಲೆ ಮಾರ್ಚ್ 23 ರಂದು ನಿಗದಿಯಾಗಿದ್ದ, ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆ ಮುಂದೂಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರದಲ್ಲೂ ವೈದ್ಯಕೀಯ ಸಿಬ್ಬಂದಿಗಳು ಥರ್ಮಲ್ ಸ್ಕ್ರೀನಿಂಗ್ ಮೂಲಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸುವ ಮೂಲಕ ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗೊಂಡಿದ್ದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಆವರಣ ಹಾಗೂ ಕೊಠಡಿಯ ಒಳಗೆ ಸಂಪೂರ್ಣವಾಗಿ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಸುರಕ್ಷತೆಯೊಂದಿಗೆ ಸ್ವಚ್ಛತೆ ಕಾಪಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಮೊಬೈಲ್ ಕೊಂಡೊಯ್ಯಲು ಅವಕಾಶವಿರಲಿಲ್ಲ. ಪರೀಕ್ಷೆ ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವು ವಿದ್ಯಾರ್ಥಿಗಳು ತಮ್ಮ ಸ್ವಂತ ವಾಹನದಲ್ಲಿ ಬಂದು ಪರೀಕ್ಷೆ ಬರೆದಿದ್ದು, ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕಲಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.