ದೊಡ್ಡಬಳ್ಳಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವಿಶ್ವನಾಥರೆಡ್ಡಿ ಅಧ್ಯಕ್ಷರಾಗಿ, ಟಿ.ಮಂಜುನಾಥ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ಎಪಿಎಂಸಿ ತೆನೆಹೊತ್ತ ರೈತ ಮಹಿಳೆಯ (ಜೆಡಿಎಸ್) ತೆಕ್ಕೆಯಿಂದ ಜಾರಿ ‘ಕೈ’ (ಕಾಂಗ್ರೆಸ್) ಹಿಡಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಕ್ಕು ಜೆಡಿಎಸ್ ಅಭ್ಯರ್ಥಿ ಬಿ.ವಿ.ಲೋಕೇಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ವಿಶ್ವನಾಥರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಮಂಜುನಾಥ್ ಮಾತ್ರ ನಾಮ ಪತ್ರಸಲ್ಲಿಸಿದರು. ಕೊನೆಗಳಿಗೆಯಲ್ಲಿ ಬಿ.ವಿ.ಲೋಕೇಶ್ ಅವರು ಎರಡೂ ಸ್ಥಾನಗಳಿಂದಲು ನಾಮ ಪತ್ರವನ್ನು ಹಿಂದಕ್ಕೆ ಪಡೆದಿದ್ದರಿಂದ ಅವಿರೋಧ ಆಯ್ಕೆನಡೆಯಿತು.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಎಪಿಎಂಸಿಯಲ್ಲಿ 7 ಕಾಂಗ್ರೆಸ್, 6 ಜೆಡಿಎಸ್ ಹಾಗೂ 3 ಬಿಜೆಪಿ ನಾಮ ನಿರ್ದೇಶಕರು ಇದ್ದಾರೆ. ಕಳೆದ ಒಂದುವರೆ ವರ್ಷಗಳಿಂದ ಜೆಡಿಎಸ್ ಪಕ್ಷದ ಮಂಜುನಾಥ್ ಅಧ್ಯಕ್ಷರಾಗಿದ್ದರು.
ಜೆಡಿಎಸ್ಗೆ ಮುಳುವಾದ ಬಣ:
6 ಜನ ನಿರ್ದೇಶಕರನ್ನು ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ ಮೂರು ಜನ ನಾಮ ನಿರ್ದೇಶಕರ ಬೆಂಬಲವು ಇತ್ತು. ಆದರೆ ಜೆಡಿಎಸ್ನಲ್ಲಿನ ಬಣ ರಾಜಕೀಯದಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.