ದೊಡ್ಡಬಳ್ಳಾಪುರ: ಕರೊನಾ ವೈರಾಣು ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ನಲ್ಲಿರಿಸಿರುವ ವ್ಯಕ್ತಿಗಳು ಜವಾಬ್ದಾರಿ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಓಡಾತ್ತಿರುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ವಿಪತ್ತು ನಿರ್ವಾಹಣಾ ಕಾಯ್ದೆ-2005ರ ಅಡಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಹಾಗೂ ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ. ಜಗದೀಶ್.ಕೆ.ನಾಯಕ್ ಅವರು ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ಮಾಡಲಾದವರು ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಬೇಕು. ಹೋಂ ಕ್ವಾರಂಟೈನ್ನಲ್ಲಿರುವವರ ಮೇಲೆ ನಿಗಾ ವಹಿಸಲು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಕ್ವಾರಂಟೈನ್ನಲ್ಲಿರಿಸಲಾದ ವ್ಯಕ್ತಿಗಳು ತಪ್ಪಿಸಿಕೊಂಡಲ್ಲಿ ಹಾಗೂ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಲ್ಲಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು.
ಹೋಂ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಸಮೀಪದ ಪೊಲೀಸ್ ಠಾಣೆಗಳಲ್ಲಿ ನಾಗರೀಕರು ಮಾಹಿತಿ ನೀಡುವ ಮೂಲಕ ಸೋಂಕು ತಡೆಗೆ ಸಹಕರಿಸಬಹುದು ಅಪರ ಜಿಲ್ಲಾಧಿಕಾರಿ ಹಾಗೂ ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.