ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ನೋಂದಣಿಯಾಗಿ ಕೌಶಲ್ಯ ಹೊಂದಿರುವ ವಲಸೆ ಕಾರ್ಮಿಕರಿಗೆ ಶ್ರೀಘ್ರವಾಗಿ ಉದ್ಯೋಗ ದೊರಕಿಸುವುದರೊಂದಿಗೆ,ಅಗತ್ಯವಿರುವ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಡೆದ ವಲಸೆ ಕಾರ್ಮಿಕರನ್ನು ಕೌಶಲ್ಯ ಇಲಾಖೆಯಲ್ಲಿ ನೋಂದಾಯಿತ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಹಾಗೂ ತರಬೇತಿ ಕಲ್ಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಕೌಶಲ್ಯ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿರುವ ಕೌಶಲ್ಯ ಹೊಂದಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಘಟಕಗಳಲ್ಲಿ ಖಾಲಿಯಿರುವ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಕ್ರಮವಹಿಸಬೇಕು ಎಂದರು.
ಜಿಲ್ಲೆಗೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಎಲೆಕ್ಟ್ರೀಷಿಯನ್, ಪ್ಲಂಬರ್, ಪೇಂಟರ್, ಬಡಗಿ, ಚಾಲಕರು ಸೇರಿದಂತೆ ಅಸಂಘಟಿತ ವಲಸೆ ಕಾರ್ಮಿಕರಿಗೆ ಸ್ಥಳೀಯ ಅಗತ್ಯಗಳಿಗೆ ಅನುಸಾರವಾಗಿ ಮರು ಕೌಶಲ್ಯ ತರಬೇತಿ ನೀಡಿ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಕೌಶಲ್ಯ ತರಬೇತಿ ನೀಡಿದ ವಲಸೆ ಕಾರ್ಮಿಕರಿಗೆ ಇತರೆ ಇಲಾಖೆಯ ಸ್ವ-ಉದ್ಯೋಗ ಯೋಜನೆಗಳ ಅನುಕೂಲವನ್ನು ಪಡೆಯುವಂತೆ ಸಮನ್ವಯ ಸಾಧಿಸಿ ಸ್ವ-ಉದೋಗಿಗಳಾಗುವಂತೆ ಕ್ರಮವಹಿಸಬೇಕು ಎಂದರು.
ಸ್ವಸಹಾಯ ಗುಂಪುಗಳು ತಯಾರಿಸುವ ಮಾಸ್ಕ್ಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತ, ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ತಾಲ್ಲೂಕು ಕಚೇರಿ ಆವರಣಗಳಲ್ಲಿ ಮಾಸ್ಕ್ ಮಾರಾಟ ಮಾಡಲು ತಾತ್ಕಾಲಿಕ ಸ್ಟಾಲ್‌ಗಳಿಗೆ ಜಾಗ ಕಲ್ಪಿಸಲಾಗುವುದು. ಇದರಿಂದ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಆರ್ಥಿಕ ಅನುಕೂಲವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ.ಭೂಶಂಕರ್, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಸುಮ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ಮುಕುಂದ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.