ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ,ನಾ ದಲಿತೆ ಎನ್ನುವ ಕಾರಣಕ್ಕೆ ಶಿಷ್ಟಾಚಾರವನ್ನು ಗಾಳಿಗೆ ತೂರಿ ಪದೇ ಪದೇ ಅವಮಾನಿಸಲಾಗುತ್ತಿದೆ ಎಂದು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು,ನಾಡ ಪ್ರಭು ಕೆಂಪೇಗೌಡರ 511 ನೇ ಜಯಂತಿ ಪ್ರಯುಕ್ತ, ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಶಿಲಾನ್ಯಾಸ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಆದರೆ ಆಹ್ವಾನ ಪತ್ರಿಕೆಯಲ್ಲಿ ಬೇಕೆಂದೇ ನನ್ನ ಹೆಸರನ್ನು ಕೈಬಿಡಲಾಗಿದೆ.
ಕಳೆದ ಸಲ ಸಹ ಇದೇ ರೀತಿ ದೊಡ್ಡಬಳ್ಳಾಪುರದಲ್ಲಿ ನಡೆದ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗವಹಿಸಬೇಕಿದ್ದ,ಭಾರತ್ ಸೇವಾ ದಳದ ಕಾರ್ಯಕ್ರಮದಲ್ಲಿಯೂ ಹೆಸರನ್ನು ಕೈಬಿಟ್ಟು ಇದೇ ರೀತಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು,ದಲಿತರೆಂಬ ಕಾರಣಕ್ಕೆ ಪದೇ ಪದೇ ಕಡೆಗಣಿಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ದಲಿತರಿಗೆ ಎಲ್ಲಾ ಕ್ಷೇತ್ರದಲ್ಲೂ ಸಮಾನತೆ ನೀಡುತ್ತೇವೆ ಎನ್ನುತ್ತಾರೆ.ಆದರೆ ಈ ರೀತಿ ಕಾರ್ಯಕ್ರಮಗಳಲ್ಲಿ ಅವಮಾನ ಮಾಡುವ ಮೂಲಕ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ.