ದೊಡ್ಡಬಳ್ಳಾಪುರ: ಕರೊನಾ ಹಿನ್ನೆಲೆ ಚೈತನ್ಯ ನಗರವನ್ನು ಸೀಲ್ ಡೌನ್ ಮಾಡಲಾದ ಕಾರಣ,ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾಗಿರುವ ಈ ವ್ಯಾಪ್ತಿಯಲ್ಲಿದ್ದ ಮೂರು ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹರಿತಲೇಖನಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು,ನಗರಸಭೆ ವ್ಯಾಪ್ತಿಯ ಚೈತನ್ಯನಗರದ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ,ಕಳೆದ ರಾತ್ರಿಯಿಂದಲೇ ಇಲಾಖೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಈ ವ್ಯಾಪ್ತಿಗೆ ಒಳಪಡುವ ಮೂರು ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ,ಪ್ರತ್ಯೇಕ ಕೊಠಡಿ ಮೂಲಕ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯ ಗಣಿತ ಪರೀಕ್ಷೆ ಆರಂಭ
ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಗಣಿತ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು,ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ 3355 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಕರೊನಾ ಪ್ರಕರಣ ಬೆಳಕಿಗೆ ಬಂದ ನಂತರ,ಅಧಿಕಾರಿಗಳಲ್ಲಿ,ಶಿಕ್ಷಕರಲ್ಲಿ,ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಆತಂಕದ ಛಾಯೆ ಕಂಡುಬಂದಿದೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)