ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಎಲ್ಲಾ ಶಾಸನಗಳನ್ನು ಸಹ ಸುಗ್ರೀವಾಜ್ಞೆ ಮೂಲಕ ತರಲು ಮುಂದಾಗಿದೆ. ಅಲ್ಲದೆ ರಾಜ್ಯಗಳಿಗೆ ಸಂವಿಧಾನ ಬದ್ದವಾಗಿ ಇರುವ ಅಧಿಕಾರವನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಭೂ ಸೂಧಾರಣ ಮಸೂದೆ ತಿದ್ದುಪಡಿ, ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಮಂಜುನಾಥ ಎಂ.ಅದ್ದೆ ದೂರಿದರು.
ಜು.2 ರಂದು ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ ಸಿದ್ದೆಗಳ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಾಸನ ಸಭೆಯನ್ನೇ ಮೂಲೆಗುಂಪು ಮಾಡಲು ಹೊರಟಿದೆ. ಸಧನದಲ್ಲಿ ಚರ್ಚಿಸಿ ಜಾರಿಗೆ ತರಬೇಕಾದಂತಹ ಕಾಯ್ದೆಗಳನ್ನು ಸಹ ಇಂದು ಸುಗ್ರೀವಾಜ್ಞೆಯ ಮೂಲಕ ಜಾರಿಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಸೇರಿದಂತೆ ಎಲ್ಲಾ ಪಧಾದಿಕಾರಿಗಳು ಸಹ ಸಂವಿಧಾನ ಪೀಠಿಕೆಯನ್ನು ಓದಿದ ನಂತರ ಪದಗ್ರಹಣ ವಚನ ಸ್ವೀಕರಿಸಲಿದ್ದಾರೆ. ಇದಲ್ಲದೆ ಕಾರ್ಯಕರ್ತರು ಸಹ ಪದಗ್ರಹಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಡೈನಮಿಕ್ ನಾಯಕ ಎಂದು ಹೆಸರಿಗಷ್ಟೇ ಕರೆಸಿಕೊಳ್ಳದೆ ತಮ್ಮ ಕೆಲಸದಲ್ಲೂ ಮಾಡಿ ತೋರಿಸುವಂತಹವರು. ಹೀಗಾಗಿಯೇ ಇಡೀ ದೇಶದಲ್ಲಿ ಇದೇ ಪ್ರಥಮ ಬಾರಿಗೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣವನ್ನು ಡಿಜಿಟಲ್ ತಂತ್ರಜ್ಞಾನ ಮೂಲಕ ಕಾರ್ಯಕರ್ತರು ಇರುವಲ್ಲಿಯೇ ಕುಳಿತು ವೀಕ್ಷಣೆ ಮಾಡುವ ಹಾಗೂ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡುವ ಸವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಧಿಕಾರ ವಿಕೇಂದ್ರಿಕರಣ ಪರಿಕಲ್ಪನೆ ಮೂಲಕ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಅಂತಿಮವಾಗಿ ಪ್ರತಿಯೊಬ್ಬರಿಗು ದೊರೆಯುವಂತೆ ಆಗಬೇಕಿದೆ. ಈ ಪರಿಕಲ್ಪನೆ ಆಧಾರದ ಮೇಲೆಯೇ ಎಲ್ಲರನ್ನು ಒಂದೆಡೆ ಸೇರಿಸಿ ಪದಗ್ರಹಣ ಸಮಾರಂಭ ನಡೆಸದೆ ರಾಜ್ಯದ 7,800 ಸ್ಥಳಗಳಲ್ಲಿ ನೇರಪ್ರಸಾರ ನಡೆಯಲಿದೆ. ಪದಗ್ರಹಣ ಸಮಾರಂಭದ ಪೂರ್ವ ಸಿದ್ದತೆಯ ಕೆಲಸಗಳು ಅಂತಿಮಗೊಂಡಿವೆ ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಜು.2 ರಂದು ನಡೆಯಲಿರುವ ಪದಗ್ರಹಣ ಸಮಾರಂಭವನ್ನು ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ನಗರಸಭೆ ವ್ಯಾಪ್ತಿಯ 6 ಸ್ಥಳಗಳಲ್ಲಿ ಎಲ್ಇಡಿ ಪರದೆಗಳ ಮೂಲಕ ನೇರ ಪ್ರಸಾರವಾಗಲಿದೆ. ಕೊರೊನಾ ವೈರಸ್ ಸೋಂಕು ರಹಡುವುದನ್ನು ತಪ್ಪಿಸುವ ಸಲುವಾಗಿ ಅಂತರ ಕಾಪಾಡುವುದು ಸೇರಿದಂತೆ ಕಾರ್ಯಕ್ರಮದಲ್ಲಿ ಅಗತ್ಯ ಇರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯ ಗೋವಿಂದಪ್ಪ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್,ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್,ನಗರ ಪ್ರಭಾರ ಅಧ್ಯಕ್ಷ ಅಂಜನಮೂರ್ತಿ,ಎಸ್ಸಿ ಘಟಕದ ಅಧ್ಯಕ್ಷ ಬಿ.ಮುನಿರಾಜು,ಎಸ್.ಟಿ ಘಟಕದ ಅಧ್ಯಕ್ಷ ಭೀಮಣ್ಣ ಇದ್ದರು.