ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ಚೈತನ್ಯನಗರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಟಿ.ವೆಂಕಟರಮಣಯ್ಯ ಪ್ರವಾಸಿ ಮಂದಿರಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾತನಾಡಿ, ಜೂ.29 ರಂದು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆ ಹಾಗೂ ವರ್ತಕರ ಸಭೆ ನಡೆಸಿ ಕರೊನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಭಿಪ್ರಾಯ ಪಡೆಯಲಾಗುವುದು. ಎಲ್ಲರ ಸಲಹೆಗಳಂತೆ ನಗರದಲ್ಲಿ ಸೋಂಕು ಹರಡದಂತೆ ಕೈಗೊಳ್ಳಬೆಕಿರುವ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ನಿರ್ಧರಿಸಲಾಗುವುದು.ಈಗಾಗಲೇ ನೆರೆಯ ತಾಲ್ಲೂಕುಗಳಾದ ನೆಲಮಂಗಲ, ದೇವನಹಳ್ಳಿ ಹಾಗೂ ವಿಜಯಪುರದಲ್ಲಿ ಸೋಂಕು ಹರಡುವುದನ್ನು ತಡೆಯಲು ಅಲ್ಲಿನ ವರ್ತಕರು, ಸಾರ್ವಜನಿಕರು ಅನುಸರಿಸುತ್ತಿರುವ ಕ್ರಮಗಳನ್ನು ಇಲ್ಲಿಯು ಜಾರಿಗೆ ತರುವ ಕುರಿತಂತೆ ಸಭೆಯಲ್ಲಿಯೇ ನಿರ್ಧರಿಸಲಾಗುವುದು ಎಂದರು.
ಕರೊನಾ ವೈರಸ್ ಸೋಂಕು ನಗರದ ಇತರೆ ಪ್ರದೇಶಗಳಿಗೂ ಹರಡದಂತೆ ಔಷಧಿ ಸಿಂಪರಣೆ, ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವುದು, ಹೋಟೆಲ್, ಮಾರುಕಟ್ಟೆ ಮತ್ತಿತರೆ ಕಡೆಗಳಲ್ಲಿ ಹೆಚ್ಚು ಜನಸಂದಣಿ ಸೇರಿದಂತೆ ನಗರಸಭೆ ವತಿಯಿಂದ ಹಾಗೂ ತಾಲ್ಲೂಕು ಆಡಳಿತದಿಂದ ಆಟೋದಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಡಿವೈಎಸ್‌ಪಿ ಟಿ.ರಂಗಪ್ಪ ಮಾಹಿತಿ ನೀಡಿ, ವಿಜಯಪುರದಲ್ಲಿ ಐದು ಜನರಿಗೆ ಕೋವಿಡ್-19 ಸೋಂಕು ಧೃಡಪಟ್ಟಿದೆ. ಅಲ್ಲಿನ ಜನ ಹಾಗೂ ವ್ಯಾಪಾರಿಗಳೆ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರೆಯುವ ಸಮಯವನ್ನು ನಿಗದಿಪಡಿಸಿಕೊಂಡಿದ್ದಾರೆ. ಇದರಿಂದ ಇಡೀ ದಿನ ಜನರು ನಗರ ಪ್ರದೇಶದಲ್ಲಿ ಅನಾವಶ್ಯಕವಾಗಿ ತಿರುಗಾಡುವುದು ತಪ್ಪಲಿದೆ. ಸಂತೆ, ಉತ್ಸವ ಸೇರಿದಂತೆ ಎಲ್ಲವನ್ನು ರದ್ದುಪಡಿಸಿದ್ದಾರೆ. ಇದೇ ಮಾದರಿಯನ್ನು ಇಲ್ಲಿಯು ಜನರೇ ನಿರ್ಧರಿಸಿಕೊಂಡರೆ ಸೋಂಕು ಹರಡುವುದನ್ನು ತಡೆಯುವುದು ಸುಲಭವಾಗಲಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್ ಶೇಕ್‌ಫೀರೋಜ್, ಎಂಜಿನಿಯರ್‌ಗಳಾದ ರಾಮೇಗೌಡ, ಚಂದ್ರಶೇಖರ್, ಈರಣ್ಣ, ನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸೋಮಶೇಖರ್ ಇದ್ದರು.