ದೊಡ್ಡಬಳ್ಳಾಪುರ: ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ ಬೆನ್ನಲ್ಲೆ,ನಟ ವಿಷ್ಣುವರ್ಧನ್ ಸ್ಮಾರಕದ ಕಡೆಗಣನೆ ಕುರಿತು ಅಭಿಮಾನಿಗಳ ಬೇಸರಕ್ಕೆ ಸಂಸದೆ,ದಿ.ಅಂಬರೀಶ್ ಪತ್ನಿ ಸುಮಲತ ಸ್ಪಷ್ಟನೆ ನೀಡಿದ್ದಾರೆ.
ವಿಷ್ಣುವರ್ಧನ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ನೋಡಿ ಖುಷಿ ಆಗುತ್ತೆ. ನಾನೂ ಕೂಡ ನಿಮ್ಮ ಹಾಗೆ ಅವರ ಅಭಿಮಾನಿ.ವಿಷ್ಣು ಅವರ ಸ್ಮಾರಕ ಇನ್ನು ಯಾಕೆ ಪ್ರಾರಂಭ ಆಗಿಲ್ಲ ಅಂತ ಕೆಲವರು ಕೇಳುತ್ತಿರುವುದು ನೋಡಿ ಆಶ್ಚರ್ಯ ಆಗುತ್ತಿದೆ. ನಿಜವಾದ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಬೇಡ.
ಈಗಾಗಲೇ ನಮ್ಮ ನೆಚ್ಚಿನ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿದೆ. ಮೈಸೂರಿನ ಸಮೀಪ, ಅವರ ಕುಟುಂಬದವರ ಇಚ್ಛೆಯಂತೆ, ಸ್ಮಾರಕ ರೂಪಗೊಳ್ಳುತ್ತಿದೆ. ನನಗೆ ತಿಳಿದಿರುವಂತೆ, ಸರಕಾರ ಅದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಅದರಲ್ಲಿ 5 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಬಹುತೇಕ ವಿಷ್ಣು ಅಭಿಮಾನಿಗಳಾಗಿ ತಿಳಿದಿದೆ.
ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲೆಡೆ ಇರುವ ಅಭಿಮಾನಿಗಳು ಅಂಬಿ ಹಾಗೂ ವಿಷ್ಣುವರ್ಧನ್ ಅವರ
ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ
ಅವರುಗಳ ಸ್ಮಾರಕದ ವಿಷಯದಲ್ಲಿ ಯಾವಾಗಲೂ ಒಗ್ಗಟ್ಟಾಗಿ ಹೆಜ್ಜೆ ಇಟ್ಟಿವೆ. ಮತ್ತು ಒಕ್ಕೂರಿಲಿನ ಧ್ವನಿಯಾಗಿದೆ.
ಅಂಬಿ ಹಾಗೂ ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹ ಹಾಗೂ ಒಬ್ಬರಿಗಗೊಬ್ಬರು ತೋರುತ್ತಿದ್ದ ಪ್ರೀತಿ ಚಿಕ್ಕವರಿಗೆ ಸ್ಫೂರ್ತಿ ಆಗಬೇಕು. ಬೇಡದ ಮಾತುಗಳಿಂದ ಅವರಿಬ್ಬರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಅವರ ಸ್ನೇಹಕ್ಕೂ ಅಪಮಾನ. ನಾಲ್ಕು ದಶಕಗಳ ಕಾಲ ಅವರ ಸ್ನೇಹ ಯಾವುದೇ ಅಹಂಗೂ ಒಳಗಾಗಲಿಲ್ಲ, ಯಾವ ವಿಷಯವೂ ಅವರ ನಡುವೆ ಕಂದಕ ತರಲಿಲ್ಲ. ಈಗ ಅವರನ್ನು ಬೇರೆ ಮಾಡಿ ಅವರ ನೆನಪುಗಳಿಗೆ ಮಸಿ ಬಳಿಯೋದು ಬೇಡ.
ಅಂಬಿ-ವಿಷ್ಣು ಇಬ್ಬರು ತಮ್ಮ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದವರು. ಅವರ ಸ್ನೇಹಕ್ಕೆ ಯಾರೂ ಧಕ್ಕೆ ತರೋದು ಬೇಡ ಹಾಗೆಯೇ ಅವರಿಬ್ಬರ ಸಾಧನೆಗಳನ್ನು ನಾವು ಗೌರವಿಸೋಣ ಎಂದಿದ್ದಾರೆ.