ಕೋಲಾರ: ಆನ್‍ಲೈನ್ ಶಿಕ್ಷಣ ಒಂದು ಬದಲಿ ಶಿಕ್ಷಣವಾಗಲಿಕ್ಕೆ ಸಾಧ್ಯವಿಲ್ಲ, ಬದಲಾಗಿ ಅದು ಪೂರಕ ಶಿಕ್ಷಣವಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಸಕಾಲ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.
ಕೋಲಾರ ತಾಲ್ಲೂಕಿನ ಕ್ಯಾಲನೂರಿ ಕೆ.ಪಿ.ಎಸ್ ಸರ್ಕಾರಿ ಪ್ರೌಢಶಾಲೆ ಹಾಗೂ ವೇಮಗಲ್ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮೂರನೇ ಮಹತ್ವ ದಿನ. ಇಂಗ್ಲೀಷ್, ಗಣಿತ ಪರೀಕ್ಷೆಗಳು ಮುಗಿದಿದ್ದು ಇಂದು ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಎರಡು ವಿಷಯಗಳಲ್ಲಿ ಶೇ 98 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಹಾಗೂ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯುವ ವಾತಾವರಣ ಸೃಷ್ಟಿ ಮಾಡಲಾಗಿದೆ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ತೊಂದರೆಯಾಗದಂತೆ ಉಚಿತವಾಗಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಪರೀಕ್ಷೆಯ ನಂತರ ಸಮಾಜ ವಿಜ್ಞಾನ, ಕನ್ನಡ, ಹಿಂದಿ ಪರೀಕ್ಷೆಗಳಿದ್ದು, ಈ ಪರೀಕ್ಷೆಗಳಿಗೂ ಸಹಾ ಇದೆ ರೀತಿಯಲ್ಲಿ ಎಚ್ಚರ ಮತ್ತು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಆನ್‍ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಆಧರಿಸಿ ತಾತ್ಕಾಲಿಕವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದೇವೆ.ಈ ಮಾರ್ಗಸೂಚಿಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಇಲ್ಲ,ಬದಲಾಗಿ ವಾರಕ್ಕೊಮ್ಮೆ ಮಕ್ಕಳ ಪೋಷಕರ ಜೊತೆ ಶಿಕ್ಷಕರು ಸಂವಾದ ಮಾಡಲು ಅವಕಾಶ ಕೊಟ್ಟಿದೆ.ರಾಜ್ಯಾದ್ಯಂತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೊ, ಟಿ.ವಿ,ಕೇಬಲ್ ಸಂಪರ್ಕ, ಇಂಟರ್‍ನೆಟ್,ಸ್ಮಾರ್ಟ್ ಪೋನ್ ಇವೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆನ್‍ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ತಜ್ಞರ ಸಮಿತಿಯಿಂದ ವರದಿ ಬಂದ ನಂತರ ಆನ್‍ಲೈನ್ ಶಿಕ್ಷಣದ ಬಗ್ಗೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ತಹಶೀಲ್ದಾರ್ ಶೋಭಿತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.