ಬೆಂಗಳೂರು: ಕಳೆದ 22 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊರೊನಾ ಪರಿಣಾಮ ಉದ್ಯೋಗ ಇಲ್ಲದೆ ಜನತೆ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ತೈಲಬೆಲೆ ಹೆಚ್ಚಿಸುವ ನರೇಂದ್ರ ಮೋದಿಯವರಿಗೆ ಮನುಷ್ಯತ್ವ ಇದೆಯಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಸೈಕಲ್ ಜಾಥಾ ನಡೆಸಿತು.
ಈ ವೇಳೆ ಮಾತನಾಡಿರುವ ಅವರು,ಕೇಂದ್ರ ಸರ್ಕಾರ ಕರೊನ ಆರ್ಥಿಕ ಸಂಕಷ್ಟದ ನಡುವೆ ಇಂಧನ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿ ಜನರ ಬದುಕಿಗೆ ಕೊಳ್ಳೆಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೈಕನ್ನು ಚಟ್ಟಕ್ಕೆ ಕಟ್ಟಿ ಎತ್ತಿಕೊಂಡು ಹೋಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.ನೂರಾರು ಜನ ಭಾಗವಹಿಸಿದ್ದರಿಂದ ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್ ಸಿಲುಕಿತ್ತು.
ಅಧ್ಯಕ್ಷ ಡಿಕೆ ಶಿವಕುಮಾರ್,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನೂರಾರು ಕಾರ್ಯಕರ್ತರು ಸೈಕಲ್ ತುಳಿದ ಪರಿಣಾಮ ಕೆಪಿಸಿಸಿ ಕಚೇರಿ ಇರುವ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.