ದೊಡ್ಡಬಳ್ಳಾಪುರ: ನಗರದ 2 ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಒಂದು ತೂಬಗೆರೆ ಹೋಬಳಿಯ ಲಕ್ಷ್ಮೀದೇವಿಪುರ ಸೀಲ್ಡೌನ್ ಹಿನ್ನೆಲೆ ಈ ಪ್ರದೇಶದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಆತಂಕ ಎದುರಾಗಿತ್ತು.ಸಾರ್ವಜನಿಕ ಶಿಕ್ಷಣ ಇಲಾಖೆ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಕಂಟೈನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳಿಗೆ ಬೇರೆ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿತ್ತು.
ಭಾನುವಾರ ನಗರದ ಚಿಕ್ಕಪೇಟೆ(ಶೆಟ್ಟರಬೀದಿ)ಯಲ್ಲಿ ಉದ್ಯಮಿ ಒಬ್ಬರಿಗೆ ಸೋಂಕು ದೃಢಪಟ್ಟ ಕಾರಣ ಎಂಎಬಿಎಲ್ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಯನ್ನು ಕಾರ್ಮಲ್ ಜ್ಯೋತಿ ಪ್ರೌಢಶಾಲೆಗೆ ವರ್ಗಾಯಿಸಲಾಗಿದೆ. ಅಲ್ಲದೆ,ಲಕ್ಷ್ಮೀ ದೇವಿಪುರ ವ್ಯಾಪ್ತಿಯಿಂದ ಬರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಯಿತು.
ಸೋಮವಾರ ನಡೆದ ವಿಜ್ಞಾನ ಪರೀಕ್ಷೆ ಸಹ ನಿರಾತಂಕವಾಗಿ ನಡೆದಿದ್ದು, ಯಾವುದೇ ಅಕ್ರಮ ವರದಿಯಾಗಿಲ್ಲ.ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಒಟ್ಟು 1 ಪರೀಕ್ಷಾ ಕೇಂದ್ರಗಳಲ್ಲಿ 3,458 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ ಒಟ್ಟು 3,366 ವಿದ್ಯಾರ್ಥಿಗಳು ಹಾಜರಾಗಿದ್ದು,92 ವಿದ್ಯಾರ್ಥಿಗಳು ಗೈರಾಗಿದ್ದಾರೆ.ಕಂಟೈನ್ಮೆಂಟ್ ವಲಯಗಳಿಂದ ಒಟ್ಟು 24, ಅನಾರೋಗ್ಯ ಕಾರಣದಿಂದ 5 ಮಂದಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾದಿಕಾರಿ ಬೈಯಪ್ಪರೆಡ್ಡಿ ತಿಳಿಸಿದ್ದಾರೆ.